ಬೆಂಗಳೂರು: ಭಾರತೀಯ ಸಾಂಖ್ಯಿಕ ಸಂಸ್ಥೆಯಲ್ಲಿ (ಐಎಸ್‌ಐ) ಪ್ರಾಧ್ಯಾಪಕ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರೂ ಆದ ಕೌಶಿಕ್ ಮಜುಂದಾರ್ ಅವರ ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ತಡೆ ಹಿಡಿದ ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಎಚ್ಆರ್‌ಎ ತಡೆ ಹಿಡಿದಿದ್ದ ಕ್ರಮವನ್ನು ಪ್ರಶ್ನಿಸಿ ಕೌಶಿಕ್ ಮಜುಂದಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅಂಗವಿಕಲರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವುದು ಕೇವಲ ನೈತಿಕ ಅಗತ್ಯ ಮಾತ್ರವಲ್ಲ. ಶಾಸನಾತ್ಮಕ ಬಾಧ್ಯತೆಯೂ ಆಗಿದೆ. ಹಾಗಾಗಿ, ಅರ್ಜಿದಾರರು ನಿರ್ಮಿಸುತ್ತಿರುವ ಹೊಸ ಕಟ್ಟಡ ನಿರ್ಮಾಣದ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಮತ್ತು 2016ರ ಅಂಗವಿಕಲರ ಹಕ್ಕುಗಳ ಕಾಯ್ದೆಯ ಅಡಿ ಉಲ್ಲೇಖಿಸಿರುವಂತೆ ಅವರಿಗೆ ಎಲ್ಲಾ ಅಗತ್ಯ ಮೂಲಸೌಕರ್ಯ ಒದಗಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಬಿ.ಸಿ.ಸೀತಾರಾಮ ರಾವ್ ವಾದ ಮಂಡಿಸಿದ್ದರು.
ಪ್ರಕರಣವೇನು?: ಪೋಲಿಯೊ ಪೀಡಿತ ಕೌಶಿಕ್ ಮಜುಂದಾರ್ ಶೇ 85ರಷ್ಟು ಅಂಗವಿಕಲತೆ ಹೊಂದಿದ್ದಾರೆ. ಅವರು 2006ರಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 2008ರಲ್ಲಿ ಸಹಾಯಕ ಪ್ರಾಧ್ಯಾಪಕ ಆಗಿ ಆಯ್ಕೆಯಾಗಿದ್ದರು. ಕೋಲ್ಕತ್ತ ಕೇಂದ್ರವನ್ನು ಆಯ್ಕೆ ಮಾಡಿದ್ದರೂ ಅವರನ್ನು ಬೆಂಗಳೂರು ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಸೇವೆಗೆ ಸೇರುವ ಮೊದಲೇ ಅವರು ತಮ್ಮ ದೈಹಿಕ ಸ್ಥಿತಿಗತಿ ಮತ್ತು ಬೆಂಗಳೂರು ಕೇಂದ್ರದಲ್ಲಿ ವಸತಿ ಅಗತ್ಯತೆ ಬಗ್ಗೆ ಇ–ಮೇಲ್ ಮೂಲಕ ಮಾಹಿತಿ ನೀಡಿದ್ದರು.
ಬೆಂಗಳೂರಿಗೆ ಬಂದಮೇಲೆ ಅವರಿಗೆ ಕ್ಯಾಂಪಸ್ ಅತಿಥಿ ಗೃಹದಲ್ಲಿ ಒಂದು ಕೋಣೆಯಲ್ಲಿ ವಸತಿ ಸೌಲಭ್ಯ ಒದಗಿಸಲಾಗಿತ್ತು. ‘ಇದು ತಾತ್ಕಾಲಿಕ ವ್ಯವಸ್ಥೆ. ನಂತರದಲ್ಲಿ ಅಗತ್ಯ ಸೌಲಭ್ಯಗಳ ವಸತಿ ಕಲ್ಪಿಸಲಾಗುವುದು’ ಎಂದು ಹೇಳಲಾಗಿತ್ತು. ಆದರೆ, 2009ರಿಂದಲೂ ಅವರು ಅದೇ ಅತಿಥಿ ಗೃಹದಲ್ಲಿದ್ದರೂ ದೈಹಿಕ ಸ್ಥಿತಿಗತಿಗೆ ಅನುಕೂಲಕರ ವಾತಾವರಣ ಇರುವ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಏತನ್ಮಧ್ಯೆ, ಅವರಿಗೆ ನೀಡಲಾಗುತ್ತಿದ್ದ ಎಚ್‌ಆರ್‌ಎ ಅನ್ನೂ ತಡೆ ಹಿಡಿಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.