ADVERTISEMENT

ಪೊಲೀಸ್‌ ಇಲಾಖೆ: 16 ಸಾವಿರ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 16,838 ಹುದ್ದೆಗಳನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲ ಡಿ.ನಾಗರಾಜ್‌ ಅವರು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ನ್ಯಾಯಪೀಠಕ್ಕೆ ಒದಗಿಸಿದರು. ‘2018–22ರ ಅವಧಿಯಲ್ಲಿ ನಿವೃತ್ತರಾಗಲಿರುವ ಹುದ್ದೆಗಳನ್ನು ಗಮನಿಸಿ 1,223 ಸಬ್ ಇನ್‌ಸ್ಪೆಕ್ಟರ್ ಮತ್ತು 13,185 ಕಾನ್ಸ್‌ಸ್ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

‘ಇಲಾಖೆಯಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಸಂಖ್ಯೆ 65,214. ಇವುಗಳ ಪೈಕಿ 48,376 ಹುದ್ದೆ ಭರ್ತಿಯಾಗಿವೆ. 16,838 ಖಾಲಿ ಇವೆ. ಕಾನ್ಸ್‌ಸ್ಟೇಬಲ್‌ ಶ್ರೇಣಿಯ 9146 ಹುದ್ದೆಗಳು ಖಾಲಿ ಇವೆ’ ಎಂದೂ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಪೊಲೀಸರ ಅವಶ್ಯಕತೆ ಇದೆ ಎಂಬ ಬಗ್ಗೆ ಅಧ್ಯಯನ ನಡೆಸಿ ಆ ಕುರಿತಂತೆ ವರದಿ ಸಲ್ಲಿಸಬೇಕು’ ಎಂದೂ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.