ADVERTISEMENT

ಕೋವಿಡ್‌ ಹೆಚ್ಚಾದರೆ ಎದುರಿಸಲು ಸರ್ಕಾರ ಸಿದ್ಧವಿದೆಯೇ: ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 19:31 IST
Last Updated 13 ಅಕ್ಟೋಬರ್ 2020, 19:31 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸವಾಲು ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ಕೈಗೊಂಡಿರುವ ಕ್ರಮಗಳ ಬಗ್ಗೆ ಸನ್ನದ್ಧತೆಯ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ 44,848 ಹಾಸಿಗೆಗಳು ಲಭ್ಯ ಇರುವ ಕುರಿತು ಸರ್ಕಾರ ಸಲ್ಲಿಸಿದ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿರುವ ಸಾಧ್ಯತೆ ಆಧರಿಸಿ ಯಾವುದೇ ವೈಜ್ಞಾನಿಕ ಮೌಲ್ಯಮಾಪನ ಮಾಡಲಾಗಿದೆಯೇ’ ಎಂದು ಪೀಠ ಪ್ರಶ್ನಿಸಿತು. ’ವೈಜ್ಞಾನಿಕ ಅಂದಾಜು ಮಾಡಿದರಷ್ಟೇ ಸೌಲಭ್ಯಗಳನ್ನು ತಕ್ಷಣಕ್ಕೆ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿತು.

ADVERTISEMENT

‘ಕೋವಿಡ್ ಸೋಂಕಿತರಿಗೆ ಹಾಸಿಗೆ ಕಾಯ್ದಿರಿಸಿರುವ ಬಗ್ಗೆ ಸರ್ಕಾರ ಮತ್ತು ಬಿಬಿಎಂಪಿ ಸಲ್ಲಿಸಿರುವ ವರದಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕೆಲವು ಖಾಸಗಿ ಆಸ್ಪತ್ರೆಗಳ ವೆಬ್‌ಸೈಟ್‌ ಗಮನಿಸಿದರೆ ಅದು ಅರ್ಥವಾಗುತ್ತದೆ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

‘ಕೋವಿಡ್ ಆಸ್ಪತ್ರೆಗಳ ಮೇಲ್ವಿಚಾರಣೆಗೆ ನೇಮಿಸಿರುವ ತಜ್ಞರ ಸಮಿತಿಯ ಮೂರು ಉಪಸಮಿತಿಗಳು ಮತ್ತು ಎಂಟು ತಂಡಗಳು ನಗರದ 64 ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿವೆ’ ಎಂದು ಬಿಬಿಎಂಪಿ ವಿವರ ಸಲ್ಲಿಸಿತು. ‘ಪ್ರತಿ ತಂಡ ದಿನಕ್ಕೆ ಕನಿಷ್ಠ ಎರಡು ಮತ್ತು ಗರಿಷ್ಠ ನಾಲ್ಕು ಆಸ್ಪತ್ರೆಗಳನ್ನು ಪರಿಶೀಲಿಸಲು ನಿರ್ದೇಶನ ನೀಡಲಾಗಿದೆ’ ಎಂದು ಪಾಲಿಕೆ ವಕೀಲರು ತಿಳಿಸಿದರು. ತಪಾಸಣಾ ತಂಡಗಳು ನೀಡಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠ ಹೇಳಿತು.

‘ರಾಜ್ಯ ಮತ್ತು ಜಿಲ್ಲಾ ಮಟ್ಟದ ತಜ್ಞರ ಸಮಿತಿಗಳು ಆಂಬುಲೆನ್ಸ್ ಲಭ್ಯತೆ ಅಂಶವನ್ನು ಪರಿಶೀಲಿಸುತ್ತಿವೆಯೇ’ ಎಂದು ಪ್ರಶ್ನಿಸಿದ ಪೀಠ, ಬೆಂಗಳೂರಿನಲ್ಲಿ ಆಂಬುಲೆನ್ಸ್ ಸೇವೆಗೆ ಕೇಂದ್ರೀಕೃತ ಯಾಂತ್ರಿಕ ವ್ಯವಸ್ಥೆ ಲಭ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.