ಬೆಂಗಳೂರು: ‘ಕುಖ್ಯಾತ ಕ್ರಿಮಿನಲ್‌ಗಳನ್ನು ನಿಗ್ರಹಿಸಬಹುದು. ಆದರೆ, ವ್ಯವಸ್ಥೆಯ ಒಳಗೇ ಇರುವ ಕ್ರಿಮಿನಲ್‌ಗಳನ್ನು ನಿಗ್ರಹಿಸಲು ಆಗದು’ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಬಹುಕೋಟಿ ಬಿಟ್ ಕಾಯಿನ್ ಪ್ರಕರಣದ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಶ್ರೀಧರ್ ಕೆ.ಪೂಜಾರ್‌ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ಶ್ರೀಧರ್ ಈ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.
ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ನಿಯಮಿತ ಜಾಮೀನು ಅರ್ಜಿ ವಜಾಗೊಂಡರೆ ಮಧ್ಯಂತರ ಜಾಮೀನು ರದ್ದಾಗಲಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ತೀರ್ಪು ನೀಡಿದೆ. ಹೀಗಾಗಿ, ಈ ಪ್ರಕರಣಕ್ಕೂ ಇದೇ ತೀರ್ಪು ಅನ್ವಯವಾಗಲಿದೆ’ ಎಂಬ ವಾದವನ್ನು ಮನ್ನಿಸಿರುವ ನ್ಯಾಯಪೀಠ, ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.
‘ಶ್ರೀಧರ್ ಪೂಜಾರ್ ವಿರುದ್ಧ ಕುಖ್ಯಾತ ಕ್ರಿಮಿನಲ್‌ಗಿಂತಲೂ ಹೆಚ್ಚಿನ ಆರೋಪಗಳಿವೆ. ವ್ಯವಸ್ಥೆಯ ಭಾಗವಾಗಿರುವ ಪೂಜಾರ್ ಅಂಥಹವರನ್ನು ನಿಗ್ರಹಿಸಲು ಕಷ್ಟ. ಅಷ್ಟೇಕೆ ಕ್ರಿಮಿನಲ್ ಮತ್ತು ಪೂಜಾರ್ ಮಧ್ಯದ ವ್ಯತ್ಯಾಸ ಗುರುತಿಸುವುದು ಇನ್ನೂ ಕಷ್ಟ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.