ADVERTISEMENT

ಐಐಎಸ್‌ಸಿ ಸಹಾಯಕ ಪ್ರಾಧ್ಯಾಪಕರ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಗೊಳಿಸಲು ನಕಾರ

ಐಐಎಸ್‌ಸಿ ಸಹಾಯಕ ಪ್ರಾಧ್ಯಾಪಕರ ವಿರುದ್ಧದ ದೂರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:35 IST
Last Updated 12 ಜೂನ್ 2025, 16:35 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಆರೋಪದ ಪ್ರಕರಣಗಳಲ್ಲಿ ಗಣನೀಯ ಪುರಾವೆಗಳು ಲಭ್ಯವಿದ್ದರೆ, ಪ್ರಾಸಿಕ್ಯೂಷನ್‌ ವೈದ್ಯಕೀಯ ಪರೀಕ್ಷೆಯ ಕೊರತೆಯನ್ನು ಮುಂದುಮಾಡಿ ಪ್ರಕರಣವನ್ನು ಅಮಾನ್ಯಗೊಳಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಂಟು ಪುಟ್ಟ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ; ‘ಪೋಕ್ಸೊ ಕಾಯ್ದೆಯಡಿ ವಿಚಾರಣೆಗೆ ಅರ್ಹವಾದ ಒಂದೇ ಒಂದು ವಿಶ್ವಾಸಾರ್ಹ ವಿವರಣೆ ಇದ್ದರೂ ಸಾಕು ಪ್ರಕರಣವನ್ನು ನಿಃಸ್ಸಂಶಯವಾಗಿ ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಹುದು’ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಐಐಎಸ್‌ಸಿಯಲ್ಲಿ ಬೋಧನೆ ಮಾಡುತ್ತಿರುವ 44 ವರ್ಷದ ಸಹಾಯಕ ಪ್ರಾಧ್ಯಾಪಕರೊಬ್ಬರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿರುವ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿಯ ಅನುಚಿತ ವರ್ತನೆಯ ಬಗ್ಗೆ ಎಂಟು ಮಕ್ಕಳು ಏಕರೂಪದ ಹೇಳಿಕೆಗಳನ್ನು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ‘ಈ ಹೇಳಿಕೆಗಳು ಇಡೀ ಪ್ರಕರಣದ ಪೂರ್ಣ ವಿಚಾರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ಆರೋಪಿಯ ಮಗಳ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ 2018ರ ಸೆಪ್ಟೆಂಬರ್ 30ರಂದು ಆಚರಿಸಲಾಗಿತ್ತು. ಅಂದು ನಡೆದ ಪಾರ್ಟಿಯಲ್ಲಿ ಕತ್ತಲೆ ಕೋಣೆಯಲ್ಲಿ ‘ಘೋಸ್ಟ್ ಹೌಸ್’ (ಭೂತದ ಮನೆ) ಆಟ ಆಯೋಜಿಸಲಾಗಿತ್ತು. ‘ಈ ಆಟ ಆಡುವಾಗ ಸಹಾಯಕ ಪ್ರಾಧ್ಯಾಪಕರು 7ರಿಂದ 8 ಬಾಲಕಿಯರ  ಜೊತೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿ ಒಬ್ಬ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದರು.

ಚಂದು ಮಾಮ ಜಾಮೀನು ವಜಾ

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್‌ ಚಂದು ಮಾಮ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಈ ಸಂಬಂಧ ಚಂದ್ರಶೇಖರ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ಏಕಸದಸ್ಯ ವಿಚಾರಣಾ ನ್ಯಾಯಾಲಯದ ಆದೇಶ ವಜಾಗೊಳಿಸಲು ತಿರಸ್ಕರಿಸಿತು. ‘ಆರೋಪಿಗಳು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪದ ಮೇರೆಗೆ ಚಂದ್ರಶೇಖರ ಅವರ ಜಾಮೀನು ರದ್ದುಪಡಿಸಬೇಕು’ ಎಂದು ಕೋರಿ ಸಿಬಿಐ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಪುರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಚಂದ್ರಶೇಖರ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಪ್ರಕರಣದ 15ನೇ ಆರೋಪಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ತಿರಸ್ಕರಿಸಿದ್ದು ವಿಚಾರಣಾ ನ್ಯಾಯಾಲಯಕ್ಕೆ ಇದೇ 13ರೊಳಗೆ ಶರಣಾಗುವಂತೆ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.