ADVERTISEMENT

ನ್ಯಾಯಾಲಯ ಕಲಾಪ ಹಂತ–ಹಂತವಾಗಿ ಆರಂಭ

ಇದೇ 28ರಿಂದ 55 ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 18:04 IST
Last Updated 19 ಸೆಪ್ಟೆಂಬರ್ 2020, 18:04 IST

ಬೆಂಗಳೂರು: ರಾಜ್ಯದ ನ್ಯಾಯಾಲಯಗಳ ಕಲಾಪಗಳು ಹಂತ–ಹಂತವಾಗಿ ಪುನರಾರಂಭವಾಗಲಿವೆ. ಹೈಕೋರ್ಟ್‌ ಹೊರಡಿಸಿರುವ ವಿಶೇಷ ಮಾರ್ಗದರ್ಶಿ ಸೂತ್ರಗಳ(ಎಸ್‌ಒಪಿ) ಪ್ರಕಾರ, 55 ತಾಲ್ಲೂಕು ನ್ಯಾಯಾಲಯಗಳಲ್ಲಿ ಇದೇ 28ರಿಂದ ಸಾಕ್ಷಿಗಳ ವಿಚಾರಣೆಯೂ ಆರಂಭವಾಗಲಿದೆ.

‘ನ್ಯಾಯಾಲಯಕ್ಕೆ ಹಾಜರಾಗುವ ಸಾಕ್ಷಿದಾರರು ಅಂದೇ ಕೋವಿಡ್ ಪರೀಕ್ಷೆ ನಡೆಸಿದ ವರದಿ(ನೆಗೆಟಿವ್) ಮತ್ತು ನ್ಯಾಯಾಲಯ ಹೊರಡಿಸಿರುವ ಸಮನ್ಸ್‌ನೊಂದಿಗೆ ಹಾಜರಾಗಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಹೊರಡಿಸಿರುವ ಎಸ್‌ಒಪಿಯಲ್ಲಿ ದಾಖಲಿಸಲಾಗಿದೆ.

ಆರೋಪಿಗಳು ಮತ್ತು ಸಾಕ್ಷ್ಯದಾರರು ಮಾತ್ರ ಹಾಜರಾಗಲು ಅವಕಾಶ ಇದೆ. ಅನಗತ್ಯವಾಗಿ ದೂರದಾರರ ಹಾಜರಾತಿಯನ್ನು ಎಸ್‌ಒಪಿಯಲ್ಲಿ ನಿರ್ಬಂಧಿಸಲಾಗಿದೆ.

ADVERTISEMENT

‘ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಕೊಪ್ಪಳ, ಚಾಮರಾಜನಗರ ಮತ್ತು ಯಾದಗಿರಿ ಸೇರಿ 13 ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 5ರಂದು ಮತ್ತು ಉಳಿದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಅ.12ರಂದು ಆರಂಭವಾಗಲಿವೆ.ಪ್ರತಿ ನ್ಯಾಯಾಲಯಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ 15 ಪ್ರಕರಣಗಳ ವಿಚಾರಣೆ ನಡೆಸಬೇಕು’ ಎಂದು ಎಸ್‌ಒಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.