ADVERTISEMENT

ಫ್ರೆಂಚ್‌ ಫ್ರೈಸ್ ತಿನ್ನಲು ಬಿಡುತ್ತಿಲ್ಲ: ಪತಿಯ ಕ್ರೌರ್ಯ ಎಂಬ ಪತ್ನಿ ದೂರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:49 IST
Last Updated 23 ಆಗಸ್ಟ್ 2024, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನನ್ನ ಗಂಡ ನನಗೆ ಫ್ರೆಂಚ್‌ ಫ್ರೈಸ್‌, ಅನ್ನ ಮತ್ತು ಮಾಂಸ ತಿನ್ನಲು ಬಿಡುತ್ತಿಲ್ಲ’ ಎಂಬ ಆರೋಪವೂ ಸೇರಿದಂತೆ ಗಂಡ, ಅತ್ತೆ ಮತ್ತು ಮಾವನ ವಿರುದ್ಧ ಪತ್ನಿಯೊಬ್ಬರು (29) ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಬೆಂಗಳೂರಿನ 36 ವರ್ಷದ (ಸದ್ಯ ಅಮೆರಿಕದ ಟೆಕ್ಸಾಸ್‌ನಲ್ಲಿ ಉದ್ಯೋಗಿ) ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿದೆ.

ಅರ್ಜಿಯಲ್ಲಿ ಏನಿದೆ?: ‘ಮದುವೆಯಾದ ನಂತರ ಪತ್ನಿಯನ್ನು ಅವಲಂಬಿತ ವೀಸಾದಡಿ ಅಮೆರಿಕಕ್ಕೆ ಕರೆದುಕೊಂಡು ಹೋದೆ. ನಮಗೀಗ ಮಕ್ಕಳೂ ಇವೆ. ನನ್ನ ಪತ್ನಿ ಅತ್ಯಂತ ಕಠಿಣ ಸ್ವಭಾವದವಳಿದ್ದಾಳೆ. ನನಗೆ ಸರಿಯಾಗಿ ಅಡುಗೆ ಮಾಡಿ ಉಣಬಡಿಸುವುದಿಲ್ಲ. ಕೇಳಿದರೆ, ನೀನೇನು ನನ್ನ ಅಡುಗೆ ಮಾಡಿ ಹಾಕುವುದಕ್ಕೆ ಮದುವೆಯಾಗಿದ್ದೀಯ ಅಂತ ಜಬರು ಮಾಡುತ್ತಾಳೆ’ ಎಂದು ಪತಿ ಅರ್ಜಿಯಲ್ಲಿ ದೂರಿದ್ದಾರೆ.

ADVERTISEMENT

‘ಸದಾ ಮೊಬೈಲ್‌ ಹಿಡಿದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ನಾಟಕಗಳು, ಸೀರಿಯಲ್‌ಗಳು, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂಗಳ ವೀಕ್ಷಣೆಯಲ್ಲೇ ಮುಳುಗಿರುತ್ತಾಳೆ. ತನ್ನ ಸೋದರ ಸಂಬಂಧಿಗಳ ಜೊತೆ ರೀಲ್ಸ್‌ ಮಾಡುವ ಹುಚ್ಚು ಬೇರೆ ಇದೆ. ಅಂಗಡಿಗೆ ಹೋದರೆ ಬೇಕಾಬಿಟ್ಟಿ ಹಣ್ಣು, ಸಾಮಾನುಗಳನ್ನು ತರುತ್ತಾಳೆ. ಆದರೆ, ಅವುಗಳನ್ನು ಸರಿಯಾಗಿ ಉಪಯೋಗಿಸುವುದಿಲ್ಲ. ನಂತರ ಕಸದ ಬುಟ್ಟಿಗೆ ಎಸೆಯುತ್ತಾಳೆ. ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ. ಆದ್ದರಿಂದ, ಆಕೆ ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು’ ಎಂದು ಪತಿ ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯಲ್ಲಿ ಪತಿ, ಪತ್ನಿಯ ಸಣ್ಣ ಸಣ್ಣ ಸಂಗತಿಗಳನ್ನೂ ಪಟ್ಟಿ ಮಾಡಿ ಆಕ್ಷೇಪಿಸಿರುವುದು ಮತ್ತು ವಿಚಾರಣೆ ವೇಳೆ ‘ಫ್ರೆಂಚ್‌ ಫ್ರೈಸ್‌ ತಿನ್ನಲು ಬಿಡುತ್ತಿಲ್ಲ‘ ಎಂಬ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಮೂರ್ತಿಗಳು, ‘ಇದೊಂದು ಕ್ಷುಲ್ಲಕ ವಿಚಾರ‘ ಎಂದು ಮೌಖಿಕವಾಗಿ ಹೇಳಿ ತಡೆ ಆದೇಶ ನೀಡಿದರು.

‘ಪ್ರಕರಣದಿಂದ ವಿದೇಶಕ್ಕೆ ತೆರಳಲು ತೊಂದರೆ ಆಗುತ್ತಿದೆ’ ಎಂಬ ಪತಿಯ ಆಕ್ಷೇಪಣೆಯನ್ನು ನಿವಾರಿಸುವಂತೆ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.