ADVERTISEMENT

ವಕೀಲ ಚಾಂದ್‌ ಪಾಷ ಅಮಾನತು: ವಕೀಲರ ಪರಿಷತ್ ಆದೇಶಕ್ಕೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 15:58 IST
Last Updated 29 ಏಪ್ರಿಲ್ 2024, 15:58 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‍ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಐಜೂರು ನಿವಾಸಿಯಾದ ವಕೀಲ ಚಾಂದ್‌ ಪಾಷ ಅವರ ವಕೀಲಿಕೆ ಅಮಾನತುಗೊಳಿಸಿದ್ದ ರಾಜ್ಯ ವಕೀಲರ ಪರಿಷತ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಪರಿಷತ್‌ ಆದೇಶ ಪ್ರಶ್ನಿಸಿ ಚಾಂದ್‌ ಪಾಷ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಪರಿಷತ್‌ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮಂಡಿಸಿದ, ‘ಪರಿಷತ್‌ ಆದೇಶ ಹೊರಡಿಸುವುದಕ್ಕೂ ಮೊದಲು ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಇದು ಸ್ವಾಭಾವಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ’ ಎಂಬ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಪರಿಷತ್‌ ಆದೇಶಕ್ಕೆ ತಡೆ ವಿಧಿಸಿತು.

ADVERTISEMENT

ಪ್ರಕರಣವೇನು?: ಉತ್ತರ ಪ್ರದೇಶದ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ 2024ರ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶಿಸಿತ್ತು. ಇದನ್ನು ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ) ಮುಖಂಡರೂ ಆದ ಚಾಂದ್ ಪಾಷ ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

ಪೋಸ್ಟ್‌ ಆಧರಿಸಿ ಬಿಜೆಪಿ ಮುಖಂಡ ಪಿ.ಶಿವಾನಂದ ಅವರು ಚಾಂದ್‌ ಪಾಷ ವಿರುದ್ಧ ರಾಮನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಪಾಷ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರುವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು. ಈ ಸಂದರ್ಭದಲ್ಲಿ ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಿತ್ತು.

ಈ ವೇಳೆ ಕೆಲ ವಕೀಲರು ಪಾಷ ಪರವಾಗಿ ಬಂದಿದ್ದ ಮುಖಂಡರನ್ನು ಪ್ರಶ್ನಿಸಿದಾಗ, ವಾಗ್ವಾದ ನಡೆದಿತ್ತು. ‘ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ’ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಅಂದು ರಾತ್ರಿ ನೀಡಿದ ದೂರಿನ ಮೇರೆಗೆ, ಪಾಷ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್ಐ ತನ್ವೀರ್ ಹುಸೇನ್ ಎಫ್ಐಆರ್ ದಾಖಲಿಸಿದ್ದರು.

ಮರುದಿನ ವಕೀಲರ ಸಂಘಕ್ಕೆ ತೆರಳಿದ್ದವರ ಪೈಕಿ ರಫೀಕ್ ಖಾನ್ ಎಂಬುವರು, ‘ವಕೀಲರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಪಿಎಸ್ಐ ಸಯ್ಯದ್ ಅವರು 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಕೆರಳಿದ ವಕೀಲರು ಪಿಎಸ್ಐ ಅಮಾನತಿಗೆ ಆಗ್ರಹಿಸಿ ಧರಣಿ ನಡೆಸಿದ್ದರು. ಈ ವಿಚಾರ ವಿಧಾನಸಭೆಯಲ್ಲೂ ಮಾರ್ದನಿಸಿತ್ತು. ವಿರೋಧ ಪಕ್ಷದ ಒತ್ತಡಕ್ಕೆ ಮಣಿದ ಸರ್ಕಾರ ಪಿಎಸ್‌ಐ ತನ್ವೀರ್‌ ಅವರನ್ನು ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ವಕೀಲರ ಪರಿಷತ್‌ ಕೂಡಾ ಚಾಂದ್ ಪಾಷಾ ಅವರ ವಕೀಲಿಕೆ ಅಮಾನತುಗೊಳಿಸಿ ಮಾರ್ಚ್‌ 30ರಂದು ಆದೇಶಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.