ADVERTISEMENT

ಐಎಎಸ್‌ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

ಕಾಕಂಬಿ ರಫ್ತು–ನಷ್ಟ ಆರೋಪ: ಮಾಜಿ ಸಚಿವ ಗೋಪಾಲಯ್ಯ ಎ–1

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:56 IST
Last Updated 25 ಜೂನ್ 2025, 15:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯದಲ್ಲಿ ಸಂಗ್ರಹಿಸಲಾದ 50 ಸಾವಿರ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಗೋವಾ ವ್ಯಾಪ್ತಿಯ ಬಂದರಿನಿಂದ ರಫ್ತು ಮಾಡಲು ಅವಕಾಶ ಕಲ್ಪಿಸಿ, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಪ್ರಕರಣವೊಂದರಲ್ಲಿ ರಾಜ್ಯದ ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಐಎಎಸ್‌ ಅಧಿಕಾರಿಗಳಾದ ಐ.ಎಸ್‌.ಎನ್‌.ಪ್ರಸಾದ್‌ (ನಿವೃತ್ತ), ಜೆ.ರವಿಶಂಕರ್, ಏಕರೂಪ ಕೌರ್ ಮತ್ತು ಮಂಜುಳಾ ನಟರಾಜ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ ವಕೀಲ ಪಿ.ಪ್ರಸನ್ನ ಕುಮಾರ್, ‘ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ, ಅರ್ಜಿದಾರರ ವಿರುದ್ಧದ ಆಪಾದನೆಗಳು ಆಧಾರರಹಿತ ಎಂಬ ಮುಕ್ತಾಯದ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿರುವುದು ಕಾನೂನಿನ ನಡೆಗೆ ವಿರುದ್ಧವಾಗಿದೆ’ ಎಂದರು. 

ADVERTISEMENT

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 17ಎ ಅಡಿಯಲ್ಲಿ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಪಡೆದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆಪಾದನೆಯೂ ಸಾಬೀತಾಗಿಲ್ಲ. ಮುಕ್ತಾಯ ವರದಿಯನ್ನು ತಿರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುನಃ ಅದೇ ತನಿಖಾ ತಂಡಕ್ಕೆ ತನಿಖೆಯ ಹೊಣೆ ವಹಿಸಿರುವುದು ತಪ್ಪು. ಇದೊಂದು ಖಾಸಗಿ ದೂರಿನಡಿ ದಾಖಲಾದ ಪ್ರಕರಣ. ಖಾಸಗಿ ದೂರಿನ ಅನುಸಾರ ಆರೋಪಿಗಳ ವಿರುದ್ಧದ ತನಿಖೆಗೆ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಪಡೆದಿಲ್ಲ. ಅಷ್ಟಕ್ಕೂ ಸ್ವತಃ ಹಣಕಾಸು ಇಲಾಖೆಯೇ ಅಧಿಕಾರಿಗಳ ಕ್ರಮದಿಂದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಬದಲಿಗೆ ಸ್ಥಳೀಯ ರೈತರಿಗೆ ಅನುಕೂಲವಾಗಿದೆ ಎಂಬ ಹಿಂಬರಹ ನೀಡಿದೆ. ಆದ್ದರಿಂದ, ತನಿಖೆಗೆ ನೀಡಲಾಗಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು. 

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಜನಪ್ರತಿನಿಧಿಗಳ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಲೋಕಾಯುಕ್ತಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಈ ಪ್ರಕರಣದಲ್ಲಿ ಅಂದಿನ ಅಬಕಾರಿ ಸಚಿವ, ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರದ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಮೊದಲ ಆರೋಪಿಯಾಗಿದ್ದಾರೆ. ‘ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ ಉಪಾಧ್ಯಕ್ಷ ಎಸ್‌.ಮಂಜುನಾಥ್‌ ಈ ಕುರಿತಂತೆ ಖಾಸಗಿ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.