ADVERTISEMENT

ರ‍್ಯಾಲಿ, ಧರಣಿ, ಸಮಾವೇಶಕ್ಕೆ ಅನುಮತಿ ನೀಡದಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 20:25 IST
Last Updated 14 ಜನವರಿ 2022, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೊರೋನಾ ನಿಯಂತ್ರಿಸಲು ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಜಾರಿಯಲ್ಲಿರುವ ತನಕ ರಾಜ್ಯದಲ್ಲಿ ಯಾವುದೇ ರ‍್ಯಾಲಿ, ಧರಣಿ ಅಥವಾ ರಾಜಕೀಯ ಸಮಾವೇಶಕ್ಕೆ ಅನುಮತಿ ನೀಡಬಾರದು‘ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಮ್ಮಿಕೊಂಡಿರುವ ಪಾದಯಾತ್ರೆ ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ನಗರದ ತಿಂಡ್ಲು ನಿವಾಸಿ ಎ.ವಿ.ನಾಗೇಂದ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಮುಂದುವರೆಸಿತು.

ವಿಚಾರಣೆ ವೇಳೆ ಕೆಪಿಸಿಸಿ ಪರ ಹಾಜರಾಗಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರು, ’ಇದೇ 12ರಂದು ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಕೊರೋನಾ ಹೆಚ್ಚುತ್ತಿರುವುದನ್ನು ಪರಿಗಣಿಸಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲಾಗಿದೆ. ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ನಂತರಮುಂದುವರಿಸಲಾಗುವುದು‘ ಎಂದರು.

ADVERTISEMENT

ಅಂತೆಯೇ, ‘ಅನ್ಯ ರಾಜಕೀಯ ಪಕ್ಷಗಳು ಎಸ್‌ಒಪಿ ಉಲ್ಲಂಘಿಸಿದ ಬಗ್ಗೆ ಸರ್ಕಾರವು ಚಕಾರ ಎತ್ತುತ್ತಿಲ್ಲ.ಕೆಪಿಸಿಸಿಯ ಪಾದಯಾತ್ರೆಯನ್ನು ಮಾತ್ರವೇ ನಿಷೇಧಿಸಿದೆ‘ ಎಂದು ಆಕ್ಷೇಪಿಸಿದರು. ’ಇದೇ 4ರಂದು ಎಸ್‌ಒಪಿ ಜಾರಿಗೆ ಬಂದ ಬಳಿಕ ಸರ್ಕಾರಿ ಆದೇಶ ಉಲ್ಲಂಘಿಸಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು‘ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ಹಾಜರಿದ್ದ ಹೆಚ್ಚವರಿ ಅಡ್ವೊಕೇಟ್‌ ಜನರಲ್ ಆರ್. ಸುಬ್ರಹ್ಮಣ್ಯ, ‘ರಾಜ್ಯದಲ್ಲಿ ಎಲ್ಲಾ ಧರಣಿ, ರ‍್ಯಾಲಿ, ಪ್ರತಿಭಟನೆ ನಿಷೇಧಿಸಿ ಇದೇ 4ರಂದು ಆದೇಶ ಹೊರಡಿಸಲಾಗಿದೆ. ಜೊತೆಗೆ, ಇದೇ 12ರಂದು ಹೈಕೋರ್ಟ್ ಆದೇಶ ನೀಡಿದ ನಂತರ ಕೆಪಿಸಿಸಿ ಪಾದಯಾತ್ರೆಯನ್ನೂ ನಿಷೇಧಿಸಲಾಗಿದೆ. ರಾಮನಗರ ಜಿಲ್ಲೆಯೂ ಸೇರಿದಂತೆ ಅಂತರ್‌ ಜಿಲ್ಲೆಗಳಲ್ಲಿ ಪಾದಯಾತ್ರೆ ಅಥವಾ ಮೆರವಣಿಗೆಗೆ ಅವಕಾಶ ಕಲ್ಪಿಸದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ‘ ಎಂದು ವಿವರಿಸಿದರು.

ಇಬ್ಬರ ಹೇಳಿಕೆಯನ್ನೂ ಪರಿಗಣಿಸಿದ ನ್ಯಾಯಪೀಠ, ‘ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕೆಪಿಸಿಸಿ ಸ್ವಯಂಪ್ರೇರಿತವಾಗಿ ಪಾದಯಾತ್ರೆ ಅಮಾನತುಗೊಳಿಸಿರುವ ಕಾರಣ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು ವಿಲೇವಾರಿ ಮಾಡಿತು.

ಕಳೆದ ವಿಚಾರಣೆ ವೇಳೆ ಕೆಪಿಸಿಸಿ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ, ‘ನೀವು ಪಾದಯಾತ್ರೆಗೆ ಯಾರಿಂದ ಅನುಮತಿ ಪಡೆದಿದ್ದೀರಿ, ಕೋವಿಡ್ ಮಾರ್ಗಸೂಚಿಯನ್ನು ಯಾಕೆ ಪಾಲನೆ ಮಾಡಿಲ್ಲ’ ಎಂದು ಪ್ರಶ್ನಿಸಿತ್ತು. ‘ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದಿರಿ’ ಎಂದು ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ, ‘ಇಂತಹ ವಿಷಯಗಳಲ್ಲಿ ನಿಮಗೆ ನ್ಯಾಯಾಂಗದ ಆದೇಶಗಳು ಬಂದ ಮೇಲೆಯೇ ಕ್ರಮ ಕೈಗೊಳ್ಳಬೇಕು ಎಂಬ ಇರಾದೆಯಿದೆಯೇ’ ಎಂದು ಅತೃಪ್ತಿ ಹೊರಹಾಕಿತ್ತು.

ನ್ಯಾಯಪೀಠದ ಪ್ರಶಂಸೆ

‘ಕಳೆದ ವಿಚಾರಣೆ ವೇಳೆ ಹೈಕೋರ್ಟ್‌ ನೀಡಿದ ಎಚ್ಚರಿಕೆಯನ್ನು ಪರಿಗಣಿಸಿ ಪಾದಯಾತ್ರೆ ಅಮಾನತುಪಡಿಸಿದ ಕಾರಣಕ್ಕಾಗಿ ನಿಮ್ಮನ್ನು ನ್ಯಾಯಾಲಯ ಪ್ರಶಂಸಿಸುತ್ತದೆ’ ಎಂದು ವಿಚಾರಣೆ ವೇಳೆ ಉದಯ ಹೊಳ್ಳ ಅವರ ಹೇಳಿಕೆಗೆ ನ್ಯಾಯಪೀಠ ಹೇಳಿತು.

ತಿಂಗಳಾಂತ್ಯದವರೆಗೆ ಯಥಾಸ್ಥಿತಿ: ಸಚಿವ ಸುಧಾಕರ್‌

ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳಲ್ಲಿ ಈ ತಿಂಗಳ ಅಂತ್ಯದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ. ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಲಾಕ್‌ಡೌನ್‌ನಂತಹ ಕ್ರಮಗಳಿಂದ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಸದ್ಯಕ್ಕೆ ನಿರ್ಬಂಧ ಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದರು.

ಲಾಕ್‌ಡೌನ್‌ನಂತಹ ನಿಯಮಗಳ ಬದಲಿಗೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಫೆಬ್ರುವರಿ ಮೊದಲ ವಾರ ಕೋವಿಡ್‌ ಮೂರನೇ ಅಲೆ ಗರಿಷ್ಠ ಮಟ್ಟ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮೂರು ಮತ್ತು ನಾಲ್ಕನೇ ವಾರದ ವೇಳೆಗೆ ಸೋಂಕಿನ ಪ್ರಮಾಣ ತಗ್ಗಬಹುದು ಎಂದೂ ಹೇಳಿದ್ದಾರೆ. ವಾರಾಂತ್ಯದ ಕರ್ಫ್ಯೂ ಕಾರಣದಿಂದ ಮುಂದಿನ ವಾರದ ವೇಳೆಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಬಹುದು ಎಂದು ಸುಧಾಕರ್‌ ತಿಳಿಸಿದರು.

ಈಗ ಸೋಂಕು ತಗುಲಿದವರಲ್ಲಿ ಶೇಕಡ 5ರಿಂದ 6ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರು ಮತ್ತು ಶುಶ್ರೂಷಕರಿಗೂ ಕೋವಿಡ್‌ ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೂಸ್ಟರ್‌ ಡೋಸ್‌ಗೆ ಅರ್ಹರಾಗಿರುವ ಎಲ್ಲರೂ ತಡಮಾಡದೆ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.

ಕೊರೋನಾ ಸಮಯದಲ್ಲಿ ರಾಜ್ಯದ ಎಲ್ಲೇ ಆಗಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ, ಮೆರವಣಿಗೆ ನಡೆಸಬಾರದು.

- ಋತುರಾಜ್‌ ಅವಸ್ಥಿ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.