ADVERTISEMENT

ಮಹಿಳೆಗೆ ರಕ್ಷಣೆ ಎಲ್ಲಿದೆ: ಹೈಕೋರ್ಟ್‌ ಕಳವಳ

ಟ್ರಯಲ್‌ ರೂಮ್‌ನಲ್ಲಿ ತರುಣಿ ಬಟ್ಟೆ ಬದಲಾಯಿಸುತ್ತಿದ್ದಾಗ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 21:53 IST
Last Updated 27 ಜನವರಿ 2026, 21:53 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬಟ್ಟೆ ಅಂಗಡಿಗೆ ಬಂದ ಗ್ರಾಹಕಿಯರು ಟ್ರಯಲ್‌ ರೂಮಿನಲ್ಲಿ ಬಟ್ಟೆ ಬದಲಾಯಿಸುವ ಫೋಟೊಗಳನ್ನು ಅಂಗಡಿಯವನೇ ಕ್ಯಾಮೆರಾದಲ್ಲಿ ರಹಸ್ಯವಾಗಿ ಸೆರೆಹಿಡಿಯುತ್ತಾನೆ ಎಂದಾದರೆ ಇಲ್ಲಿ ಯಾವ ಮಹಿಳೆ ತಾನೆ ಸುರಕ್ಷಿತವಾಗಿದ್ದಾರೆ’ ಎಂದು ಹೈಕೋರ್ಟ್‌ ಬೆಂಕಿಯುಗುಳಿದೆ.

‘ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಆರೋಪಿಯಾದ ನಗರದ ದೊಡ್ಡಮಾವಳ್ಳಿಯ ಲಾಲ್‌ಬಾಗ್‌ ಕೋಟೆ ರಸ್ತೆ ನಿವಾಸಿ ಫೈಸಲ್‌ ಉಲ್ಲಾ ಷರೀಫ್‌ (21) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ಪರ ಹೈಕೋರ್ಟ್‌ ವಕೀಲ ಸೈಯದ್‌ ಜಹೀರುದ್ದೀನ್‌ ಬರೀದ್‌, ‘ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪಂಚನಾಮೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿದರು.

ADVERTISEMENT
ಈ ಪ್ರಕರಣದಲ್ಲಿ ಆರೋಪಿಯು ಸ್ವತಃ ವಿಡಿಯೊ ಶೂಟ್‌ ಮಾಡಿದ್ದಾರೆ. ನಿಶ್ಚಿತವಾಗಿ ಇದು ವೋಯರಿಸಂ. ಇಂತಹವರಿಗೆ ಹೇಗೆ ತಾನೆ ರಕ್ಷಣೆ ನೀಡಲು ಸಾಧ್ಯ? ಇವರಿಗೆಲ್ಲಾ ಸರಿಯಾದ ಪಾಠ ಕಲಿಸಬೇಕು
– ನ್ಯಾ.ಎಂ.ನಾಗಪ್ರಸನ್ನ

ಇದಕ್ಕೆ ನ್ಯಾಯಪೀಠ, ‘ನೀವು, ಆರೋಪಿ ಇನ್ನೂ ಚಿಕ್ಕವನು ಎನ್ನುತ್ತಿದ್ದೀರಿ. ಆದರೆ ಆತ ಚಿಕ್ಕವನೇನಲ್ಲ. ಈ ರೀತಿಯಾದರೆ ಯಾವ ಮಹಿಳೆಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಹೇಳುತ್ತಿದ್ದೀರಲ್ಲಾ? ಹಾಗಾದರೆ ಹೋಗಿ ಬಿಡುಗಡೆಯ ಅರ್ಜಿ ಹಾಕಿಕೊಳ್ಳಿ. ಇಂತಹುದನ್ನೆಲ್ಲಾ ಸಹಿಸುವುದಿಲ್ಲ. ಇಂತಹವರಿಗೆ ಸರಿಯಾದ ಪಾಠ ಕಲಿಸಬೇಕು’ ಎಂದು ಎಚ್ಚರಿಸಿದರು. ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ವಾದ ಮಂಡಿಸಿದರು.

ಪ್ರಕರಣವೇನು?: ‘ಪ್ರಕರಣದ ಆರೋಪಿ ಫೈಸಲ್‌ ಉಲ್ಲಾ ಷರೀಫ್‌ ಜಯನಗರ 4ನೇ ಬ್ಲಾಕ್‌ನ 10ನೇ ‘ಎ’ ಮುಖ್ಯ ರಸ್ತೆಯಲ್ಲಿರುವ ‘ಕ್ವೀನ್ಸ್‌ ಡಿಸೈನರ್‌ ವೇರ್‌ ಲೇಡಿಸ್‌’ ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾರೆ. ದೂರುದಾರರಾದ 28 ವರ್ಷದ ತರುಣಿ 2024ರ ಸೆಪ್ಟೆಂಬರ್ 8ರಂದು ಸಂಜೆ 6.30ರ ಸಮಯದಲ್ಲಿ, ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದರು. ಟ್ರಯಲ್‌ ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಆ ರೂಮಿನ ಬಾಗಿಲ ಮೇಲಿನ ಸಣ್ಣದಾದ ಸಂದಿನಿಂದ ಆರೋಪಿಯು, ತರುಣಿ ಬಟ್ಟೆ ಬದಲಾಯಿಸುತ್ತಿದ್ದ ಖಾಸಗಿ ಫೋಟೊಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದುದು ತನಿಖೆಯಿಂದ ದೃಢಪಟ್ಟಿರುತ್ತದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಕಲಂ 77ರ ಅಡಿಯಲ್ಲಿ 2ನೇ ಹೆಚ್ಚುವರಿ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಶಿಕ್ಷಾರ್ಹ ಅಪರಾಧ ‘ವೋಯರಿಸಂ’ 

ಬಿಎನ್ಎಸ್ ಕಲಂ 77ರ ವ್ಯಾಖ್ಯಾನ: ಕಲಂ 77ರ ಪ್ರಕಾರ (ಈ ಹಿಂದಿನ ಐಪಿಸಿ ಕಲಂ 354ಸಿ) ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರುವುದನ್ನು ‘ವೋಯರಿಸಂ’ ಅಪರಾಧ ಎಂದು ಪರಿಗಣಿಸಲಾಗುತ್ತದೆ. ವೋಯರಿಸಂ ಎಂದರೆ ಮಹಿಳೆಯ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಕೃತ್ಯಗಳನ್ನು ಅಂದರೆ; ಸ್ನಾನ ಮಾಡುವುದು ಬಟ್ಟೆ ಬದಲಾಯಿಸುವುದು ಲೈಂಗಿಕ ಚಟುವಟಿಕೆ ಅಥವಾ ಖಾಸಗಿ ಸ್ವಭಾವಗಳಲ್ಲಿ ನಿರತವಾದಂತಹ ಕ್ರಿಯೆಗಳ ನಿಕಟ ನಡವಳಿಕೆಗಳಲ್ಲಿ ತೊಡಗಿದ್ದಾಗ ಅದನ್ನು ಕದ್ದು ನೋಡುವ ಲೈಂಗಿಕ ಆಸಕ್ತಿ ಅಥವಾ ಅಭ್ಯಾಸ. ಈ ಕೃತ್ಯಗಳನ್ನು ವೀಕ್ಷಿಸುವ ಚಿತ್ರೀಕರಿಸುವ ಅಥವಾ ಪ್ರಸಾರ ಮಾಡುವುದು ಶಿಕ್ಷಾರ್ಹ ವ್ಯಾಪ್ತಿಗೆ ಒಳಪಡುತ್ತದೆ. ಮೊದಲ ಬಾರಿ ಮಾಡಿದ ಅಪರಾಧಕ್ಕೆ 1ರಿಂದ 3 ವರ್ಷಗಳವರೆಗಿನ ಜೈಲು ಶಿಕ್ಷೆ ತದನಂತರದ ಇಂತಹುದೇ ಅಪರಾಧವನ್ನು ಮರುಕಳಿಸಿದರೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.