ADVERTISEMENT

ಅತ್ಯಾಚಾರ| ಸಿಐಎಸ್‌ಎಫ್‌ನ 8 ಕಾನ್‌ಸ್ಟೆಬಲ್‌ ವಜಾ ಎತ್ತಿಹಿಡಿದ ಹೈಕೋರ್ಟ್‌

ಸಹೋದ್ಯೋಗಿ ಪತ್ನಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:30 IST
Last Updated 22 ಜೂನ್ 2022, 20:30 IST
   

ಬೆಂಗಳೂರು: ಸಹೋದ್ಯೋಗಿಯ ಪತ್ನಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ, ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದಡಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಎಂಟು ಕಾನ್‌ಸ್ಟೆಬಲ್‌ಗಳನ್ನುವಜಾಗೊಳಿಸಿರುವ ಸಕ್ಷಮ ಪ್ರಾಧಿಕಾರದ ಶಿಸ್ತುಪಾಲನಾ ಸಮಿತಿಯ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದಿದೆ.

ಈ ಸಂಬಂಧ ವಿಕಾಸ್ ವರ್ಮಾ ಸೇರಿದಂತೆ ಎಂಟು ಜನ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯ ಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿದ್ದು, ‘ಆರೋಪಿಗಳ ಕೃತ್ಯವು ಸಿಐಎಸ್‌ಎಫ್ ಪಡೆಯ ಶಿಸ್ತು ಮತ್ತು ಸದಾಚಾರಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಅವರನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸಮಂಜಸವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೇರಿದ ಮೈಸೂರಿನ ನೋಟು ಮುದ್ರಣ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿಗಳು ಮತ್ತು ಸಂತ್ರಸ್ತೆಯ ಪತಿ ಸಹೋದ್ಯೋಗಿಗಳು. ಎಲ್ಲರೂ ಘಟಕದ ವಸತಿಗೃಹಗಳಲ್ಲಿ ವಾಸ ಮಾಡುತ್ತಿದ್ದು, 2015ರ ಮಾರ್ಚ್‌ ಮತ್ತು ಜೂನ್‌ ಮಧ್ಯ ಭಾಗದಲ್ಲಿ ಮುಖ್ಯ ಆರೋಪಿ ವಿಕಾಸ್‌ ವರ್ಮಾ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದ.

ADVERTISEMENT

ಸಂತ್ರಸ್ತೆಯ ಪತಿ ದೂರದ ಊರಿಗೆ ತೆರಳಿದಾಗ ವಿಕಾಸ್‌ ವರ್ಮಾ ಆಕೆಯೊಂದಿಗೆ ಮೊಬೈಲ್‌ ಫೋನ್‌ ಮೂಲಕ ಸಂಪರ್ಕ ಸಾಧಿಸಿ ಸಖ್ಯ ಬೆಳೆಸಿದ್ದ. ಸಖ್ಯ ನಿಕಟವಾದಂತೆ; ‘ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದದೇ ಹೋದರೆ ಫೋನ್‌ನಲ್ಲಿ ಮಾತನಾಡಿರುವ ಆಪ್ತ ವಿಚಾರಗಳನ್ನೆಲ್ಲಾ ನಿನ್ನ ಪತಿಗೆ ತಿಳಿಸುತ್ತೇನೆ’ ಎಂದು ಬೆದರಿಕೆ ಹಾಕಿ ಸಮಯ ಸಾಧಿಸಿ ಅತ್ಯಾಚಾರ ಎಸಗಿದ್ದ.

ಈ ವಿಷಯ ಗೊತ್ತುಪಡಿಸಿಕೊಂಡ ವರ್ಮಾನ ಸಹೋದ್ಯೋಗಿಗಳಾದ ಅಂಕುಶ್ ಪಿನಿಯಾ, ಪಿಂಕು ಕುಮಾರ್, ವಿ.ಕೆ ತಿವಾರಿ, ಚಂದನ್ ಕುಮಾರ್, ರಾಹುಲ್ ದಿವಾಕರ್, ಜಿತೇಂದ್ರ ಸಿಂಗ್‌ ಸಂತ್ರಸ್ತೆಗೆ ಕರೆ ಮಾಡಿ, ‘ವಿಕಾಸ್ ವರ್ಮಾ ಜೊತೆಗಿನ ಅಕ್ರಮ ಸಂಬಂಧ ನಮಗೆಲ್ಲಾ ಗೊತ್ತು. ನೀನು ನಮ್ಮೊಂದಿಗೂ ಲೈಂಗಿಕ ಸಂಪರ್ಕ ಬೆಳೆಸದೇ ಹೋದರೆ ಎಲ್ಲಾ ವಿಚಾರವನ್ನೂ ನಿನ್ನ ಪತಿಗೆ ಹೇಳುತ್ತೇವೆ’ ಎಂದು ಬೆದರಿಕೆ ಹಾಕಿದ್ದರು.

ಇದರಿಂದ ದಿಕ್ಕು ತೋಚದೆ ಸಂತ್ರಸ್ತೆ ಆರೋಪಿಗಳ ಬೆದರಿಕೆಗೆ ತಲೆಬಾಗಿದ್ದರು. ಈ ವಿಷಯ 2015ರ ಜೂನ್‌ 28ರಂದು ಸಂತ್ರಸ್ತೆಯ ಪತಿಗೆ ತಿಳಿದು, ಅದೇ ವರ್ಷದ ಜುಲೈ 2ರಂದು ದೂರು ನೀಡಲಾಗಿತ್ತು. ತನಿಖೆ ನಡೆಸಿದ್ದ ಶಿಸ್ತುಪಾಲನಾ ಸಮಿತಿ ಮತ್ತು ಮೇಲ್ಮನವಿ ಪ್ರಾಧಿಕಾರ ಎಂಟು ಕಾನ್‌ಸ್ಟೆಬಲ್‌ಗಳನ್ನು ಕರ್ತವ್ಯದಿಂದ ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ವಿಭಾಗೀಯ ನ್ಯಾಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.