ADVERTISEMENT

ದೇಶಿಯ ಭಾಷೆಗಳನ್ನು ಉಳಿಸಿ ಬೆಳೆಸಲು ಒತ್ತು: ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 15:01 IST
Last Updated 18 ಜುಲೈ 2021, 15:01 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶಿಯ ಭಾಷೆಗಳನ್ನು ಉಳಿಸಿ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಸ್ವಾಯತ್ತತೆ ಇರಲಿದ್ದು, ಏಕಪಕ್ಷೀಯವಾಗಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಬಲವಂತದಿಂದ ಯಾವುದನ್ನೂ ಹೇರಲಾಗುವುದಿಲ್ಲ. ಈ ವಿಚಾರದಲ್ಲಿ ಗೊಂದಲ ಬೇಡ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಅಧ್ಯಾಪಕರ ಸಂಘವು ಕರ್ನಾಟಕದ ವಿಶ್ವವಿದ್ಯಾಲಯಗಳ ಎಲ್ಲಾ ಭಾಷೆಗಳ ಅಧ್ಯಾಪಕ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷೆಗಳು’ ವಿಷಯದ ಕುರಿತ ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಭಾನುವಾರ ಅವರು ಮಾತನಾಡಿದರು.

‘ನಮ್ಮ ಭಾಷೆಯಲ್ಲೇ ಎಲ್ಲಾ ಬಗೆಯ ಅಧ್ಯಯನಗಳು ನಡೆಯಬೇಕು. ಸ್ಥಳೀಯ ಭಾಷೆಗಳಲ್ಲೇ ವೃತ್ತಿಪರ ಕೋರ್ಸ್‌ಗಳನ್ನು ಕಲಿಸುವ ಜೊತೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವುದಕ್ಕೆ ಬೇಕಾದ ಸಹಕಾರ ಹಾಗೂ ಪ್ರೋತ್ಸಾಹ ನೀಡಲಾಗುತ್ತದೆ. ಈ ನೀತಿ 21ನೇ ಶತಮಾನಕ್ಕೆ ಪೂರಕವಾಗಿದ್ದು, ಭಾಷೆ, ಸಂಸ್ಕೃತಿ, ಇತಿಹಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂಬ ಉದ್ದೇಶ ಒಳಗೊಂಡಿದೆ. ಮಕ್ಕಳಲ್ಲಿ ಶೇ 75ರಷ್ಟು ಕಲಿಕೆ ಮೂರರಿಂದ ಆರು ವಯಸ್ಸಿನಲ್ಲಿ ಆಗುತ್ತದೆ. ಈ ಕಾರಣಕ್ಕೆ ಮೂರು ವರ್ಷ ಪೂರೈಸಿದ ಮಗುವನ್ನೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಒತ್ತು ನೀಡಲಾಗಿದೆ’ ಎಂದರು.

ADVERTISEMENT

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ‘ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂದು ಯಾವುದನ್ನೂ ಕರೆದಿಲ್ಲ. ಹೀಗಿದ್ದರೂ ರಾಷ್ಟ್ರಭಾಷೆ ಎಂದು ಪದೇ ಪದೇ ಉಚ್ಛರಿಸುವಂತಹ ಗುಂಪೊಂದು ಇದೆ. ಸಂವಿಧಾನಾತ್ಮಕವಾಗಿ ಅಂಗೀಕೃತಗೊಂಡಿರುವ ಎಲ್ಲಾ ಭಾಷೆಗಳ ಬಗೆಗೆ ಸಮಾನವಾಗಿ ಮಾತನಾಡುವ ಗುಂಪು ಕೂಡ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಪ್ರಾದೇಶಿಕ ಭಾಷೆಗಳು, ಸ್ಥಳೀಯ ಭಾಷೆಗಳು, ಮಾತೃಭಾಷೆ (ಮನೆ ಮಾತು) ಎಂಬ ಶಬ್ದಗಳನ್ನು ಬಳಸಲಾಗಿದೆ. ಆದರೆ ರಾಜ್ಯಭಾಷೆ ಎಂಬುದನ್ನು ಉಲ್ಲೇಖಿಸಿಲ್ಲ. ಇದನ್ನು ಗಮನಿಸಬೇಕು’ ಎಂದು ತಿಳಿಸಿದರು.

‘ಶಿಕ್ಷಣ ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯಭಾಷೆ ಎಂಬ ಪರಿಭಾಷೆ ಇದೆ. ತಾವು ಯಾವ ಭಾಷೆ ಕಲಿಯಬೇಕೆಂಬುದು ಅವರವರ ಇಚ್ಛಾಶಕ್ತಿಗೆ ಬಿಟ್ಟಿದ್ದು. ಯಾವುದೇ ಭಾಷೆಯನ್ನು ಒಂದು ಸಮುದಾಯದ ಮೇಲೆ ಹೇರುವುದನ್ನು ಯಾರೂ ಸಹಿಸುವುದಿಲ್ಲ. ಈ ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿರುವಂತೆ ಭಾಸವಾಗುತ್ತಿವೆ. ಖಾಸಗೀಕರಣದತ್ತ ಹೆಚ್ಚು ಒತ್ತು ನೀಡುವ ಆಶಯ ಹೊಂದಿರುವಂತಿದೆ. ಇದರಲ್ಲಿ ವಿಕೇಂದ್ರಿಕರಣಕ್ಕಿಂತಲೂ ಕೇಂದ್ರೀಕೃತ ಆಧಿಪತ್ಯದ ನೀತಿ ಕಾಣಸಿಗುತ್ತದೆ’ ಎಂದರು.

ಆಂಧ್ರಪ್ರದೇಶ ಕೇಂದ್ರೀಯ ಅನುಸೂಚಿತ ಜಾತಿಯ ವಿಶ್ವವಿದ್ಯಾಲಯದ ಕುಲಪತಿ ಟಿ.ಕಟ್ಟಿಮನಿ ‘ರಾಜ್ಯ ಭಾಷೆಯಲ್ಲೇ ಶಿಕ್ಷಣ ನೀಡಬೇಕು. ಇದರಿಂದ ನಮ್ಮ ಸಂಸ್ಕೃತಿ, ಬದುಕುವ ಕಲೆಯನ್ನು ವೈಜ್ಞಾನಿಕವಾಗಿ ವಿಸ್ತರಿಸಲು ಅನುವಾಗುತ್ತದೆ’ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆಯ ಪಠ್ಯಕ್ರಮ ಉಪ ಸಮಿತಿಯ ಅಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.