ಬೆಂಗಳೂರು: ‘ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಮತ್ತು ಭೂ ಮಾಲೀಕರಿಗೆ ಅತೀ ಹೆಚ್ಚು ನೋಟಿಸ್ ನೀಡಲಾಗಿದ್ದರೂ, ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ ಆರೋಪಿಸಿದರು.
ಕೆಪಿಸಿಸಿಯ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತದ ಅವಧಿಯಲ್ಲಿ 2,001 ನೋಟಿಸ್ ನೀಡಲಾಗಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಕೇವಲ 1,500 ನೋಟೀಸ್ ನೀಡಲಾಗಿದೆ’ ಎಂದರು.
ಅದಾನಿ ನೇತೃತ್ವ: ‘ಮಹಾರಾಷ್ಟ್ರ ಚುನಾವಣೆಯಲ್ಲಿ ಅದಾನಿ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅವರ ವಿರುದ್ಧ ಹಗರಣಗಳ ಆರೋಪದ ವಿಚಾರವಾಗಿ ಯಾವುದೇ ಚರ್ಚೆ ಆಗದೆ ಕ್ಲೀನ್ ಚೀಟ್ ಕೊಡಲು ಹೇಗೆ ಸಾಧ್ಯ? ಹಲವು ರಾಷ್ಟ್ರಗಳು ಅದಾನಿ ಮೇಲೆ ಆರೋಪಿಸುತ್ತಿರುವ ಬಗ್ಗೆ ಲೋಕಸಭೆ ಕಲಾಪದಲ್ಲಿ ಚರ್ಚೆ ಮಾಡಲು ಅವಕಾಶ ಕೊಡದೆ ಇರುವುದು ಖಂಡನೀಯ’ ಎಂದರು.
‘ಅಂತರಿಕ ಕೋಲಾಹಲವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಕೆಸರೆರಚುವ ಕೆಲಸ ಮಾಡುತ್ತಿದೆ. ತಮ್ಮ ಪಕ್ಷದಲ್ಲೇ ಕಿತ್ತಾಟ, ಹುಳುಕುಗಳು ಇಡೀ ರಾಜ್ಯಕ್ಕೆ ಕಾಣುತ್ತಿದ್ದರೂ, ಮುಡಾ ಹಾಗೂ ವಕ್ಫ್ ವಿಚಾರವನ್ನು ಬಿಜೆಪಿ ನಾಯಕರು ಪದೇ ಪದೇ ಎತ್ತುತ್ತಿದ್ದಾರೆ’ ಎಂದು ವಿ.ಎಸ್ ಉಗ್ರಪ್ಪ ದೂರಿದರು.
‘ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಕಿತ್ತಾಟವಿದ್ದರೂ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷರ ಮಾಧ್ಯಮ ಸಲಹೆಗಾರ ದೀಪಕ್ ತಿಮಯ್ಯ, ಮಾಜಿ ಮೇಯರ್ ರಾಮಚಂದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.