ADVERTISEMENT

ಅಪ್ರಾಮಾಣಿಕ ಪೊಲೀಸರನ್ನು ಸಹಿಸುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 20:58 IST
Last Updated 18 ಆಗಸ್ಟ್ 2021, 20:58 IST
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾರಸುದಾರರಿಗೆ ಸ್ವತ್ತನ್ನು ಹಿಂತಿರುಗಿಸಿದರು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾರಸುದಾರರಿಗೆ ಸ್ವತ್ತನ್ನು ಹಿಂತಿರುಗಿಸಿದರು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.   

ಬೆಂಗಳೂರು: ‘ಪೊಲೀಸರ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಅವು ಕೂಡಲೇ ನಿಲ್ಲಬೇಕು. ಅಪ್ರಾಮಾಣಿಕ ಪೊಲೀಸ್‌ ಸಿಬ್ಬಂದಿಯನ್ನು ಯಾವ ಕಾರಣಕ್ಕೂ ನಾನು ಸಹಿಸುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಮೈಸೂರು ರಸ್ತೆಯಸಿಎಆರ್ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ಕಳವು ಮತ್ತು ಜಪ್ತಿ ಮಾಡಿದ ವಸ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಸ್ವತ್ತು ಹಿಂತಿರುಗಿಸುವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಅಪರಾಧ ಪ್ರಕರಣಗಳಲ್ಲಿ ಪೊಲೀಸರೂ ಭಾಗಿಯಾಗಿದ್ದಾರೆ ಎಂದಾಗ ಅಂತಹವರ ಮೇಲೆ ಅಸಹ್ಯ ಮೂಡುತ್ತದೆ. ಇದು, ಪ್ರಾಮಾಣಿಕ ಪೊಲೀಸ್ ವೃಂದಕ್ಕೂ ಕಪ್ಪು ಚುಕ್ಕೆ. ಹಾಗಾಗಿ, ಅಪ್ರಾಮಾಣಿಕ ಪೊಲೀಸರ ಪಟ್ಟಿ ಸಿದ್ಧಪಡಿಸಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟಬುತ್ತಿ. ವರ್ಗಾವಣೆ ವ್ಯವಸ್ಥೆಯಲ್ಲೂ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಣಕ್ಕೆ ತರಲಾಗುವುದು’ ಎಂದರು.

ADVERTISEMENT

‘ಯಾರು ಕೆಟ್ಟರೂ ತೊಂದರೆಯಾಗುವುದಿಲ್ಲ. ಆದರೆ, ಒಬ್ಬ ಪೊಲೀಸ್ ತಪ್ಪು ದಾರಿ ಹಿಡಿದಾಗ, ಸಮಾಜದ ಮೇಲೆ ಬಹಳ ದೊಡ್ಡ ದುಷ್ಪರಿಣಾಮ ಬೀರುತ್ತದೆ. ಹಣದ ದಾಸರಾಗಿ ಅದರ ಹಿಂದೆ ಹೋಗಬೇಡಿ. ಅಪರಾಧಿಗಳನ್ನು ಪೋಷಿಸುವ ಕೆಲಸ ಮಾಡದೆ, ಅವರನ್ನು ಹತ್ತಿಕ್ಕಬೇಕು’ ಎಂದು ಕಿವಿಮಾತು ಹೇಳಿದರು.

ಸಿಬ್ಬಂದಿಗೆ ವಸತಿ ಭರವಸೆ:
‘ಪ್ರಸ್ತುತ ಪೊಲೀಸರಿಗೂ ಸರ್ಕಾರ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದೆ. ಸದ್ಯ ಶೇ 49ರಷ್ಟು ಪೊಲೀಸರಿಗೆ ಉತ್ತಮ ವಸತಿ ಸೌಲಭ್ಯ ಸಿಕ್ಕಿದೆ. ಉಳಿದವರಿಗೂ ಶೀಘ್ರದಲ್ಲೇ ವಸತಿ ಸೌಕರ್ಯ ಕಲ್ಪಿಸಲಾಗುವುದು. ಈ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಇರುವವರಿಗೆ ರಕ್ಷಣೆ ನೀಡಲು ಪ್ರತ್ಯೇಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಈ ಬಗ್ಗೆ ವರದಿ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.