ADVERTISEMENT

ಹನಿಟ್ರ್ಯಾಪ್‌ಗೆ ಕೆಡವಲು ರಾಜಕೀಯ ಎದುರಾಳಿಗಳ ನೆರವು!

ಹೊನಕೆರೆ ನಂಜುಂಡೇಗೌಡ
Published 30 ನವೆಂಬರ್ 2019, 2:18 IST
Last Updated 30 ನವೆಂಬರ್ 2019, 2:18 IST
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಗದಗ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಆಗಸ್ಟ್‌ ತಿಂಗಳಿಂದಲೇ ಕಾರ್ಯಾಚರಣೆಗಿಳಿದಿದ್ದ ಟಿ.ವಿ ಧಾರಾವಾಹಿ ನಟಿ ಮತ್ತು ಸಂಗಡಿಗರಿಗೆ ರಾಜಕೀಯ ಎದುರಾಳಿಗಳು ₹ 1 ಲಕ್ಷ ನೀಡಿದ್ದರು’ ಎಂಬ ಸಂಗತಿ ಬಯಲಿಗೆ ಬಂದಿದೆ.

ಗದಗ ಜಿಲ್ಲೆ ಶಾಸಕರನ್ನು ಹನಿಟ್ರ್ಯಾಪ್‌ ಜಾಲದಲ್ಲಿ ಕೆಡವಿ, ಅದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಳ್ಳಲು
₹ 10 ಲಕ್ಷ ಕೊಡುವಂತೆ ಧಾರಾವಾಹಿ ನಟಿ ಮತ್ತು ಅವರ ಸಹಚರರು, ಶಾಸಕರ ರಾಜಕೀಯ ಎದುರಾಳಿಗಳನ್ನು ಕೇಳಿದ್ದರು. ಆದರೆ, ಕೇವಲ ₹ 1 ಲಕ್ಷ ಪಾವತಿಸಿದ್ದರು ಎನ್ನಲಾಗಿದೆ.

‘ನಿಮ್ಮ ಕ್ಷೇತ್ರದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಕ್ಯಾಂಪ್‌ ಮಾಡಬೇಕಾಗಿದೆ. ನಾವು ಒಂದು ವಾರ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ’ ಎಂದು ಶಾಸಕರ ಬಳಿ ಮಹಿಳೆಯರು ಮನವಿ ಮಾಡಿದ್ದರು. ಆ ಮೂಲಕ ಶಾಸಕರನ್ನು ‍ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಕೆಡವಿದರು. ಆರಂಭದಲ್ಲಿ ಮಹಿಳೆಯರ ಬಗ್ಗೆ ಆಸಕ್ತಿ ತೋರದ ಅವರು ಬಳಿಕ ಅವರು ತೋಡಿದ ಖೆಡ್ಡಾದಲ್ಲಿ ಬಿದ್ದರು. ಈ ರಾಸಲೀಲೆಯನ್ನು ಧಾರಾವಾಹಿ ನಟಿ ರಹಸ್ಯವಾಗಿ ಚಿತ್ರೀಕರಿಸಿಕೊಂಡು, ತಮ್ಮ ಸಹಚರರಿಗೆ ನೀಡಿದ್ದರು. ಅದನ್ನು ತೋರಿಸಿ ಆರೋಪಿಗಳು ₹ 50 ಕೋಟಿಗೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ತಮ್ಮ ಬಳಿ ಇಲ್ಲವೆಂದ ಬಳಿಕ ₹ 10 ಕೋಟಿ ಕೊಡುವಂತೆ ಪಟ್ಟು ಹಿಡಿದಿದ್ದರು ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.

ADVERTISEMENT

ಗದಗ ಜಿಲ್ಲೆಯ ಶಾಸಕರೊಬ್ಬರ ರಾಸಲೀಲೆಯನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಮಹಿಳೆಗೆ ಮತ್ತಿಬ್ಬರು ಶಾಸಕರು ತಮ್ಮ ಜೊತೆ ಕಾಲ ಕಳೆದ ಕ್ಷಣಗಳನ್ನು ರೆಕಾರ್ಡ್‌ ಮಾಡಲು ಸಾಧ್ಯವಾಗಲಿಲ್ಲ. ಉಡುಪಿ ಜಿಲ್ಲೆ ಶಾಸಕರೊಬ್ಬರು ಮಹಿಳೆ ತಮ್ಮ ಕೊಠಡಿಯೊಳಗೆ ಬರುತ್ತಿದ್ದಂತೆ ದೀಪ ಆರಿಸಿದ್ದರು. ಉತ್ತರಕನ್ನಡ ಜಿಲ್ಲೆಯ ಶಾಸಕರೊಬ್ಬರ ಜೊತೆಗಿದ್ದ ಕ್ಷಣ
ಗಳನ್ನು ಆರೋಪಿ ಚಿತ್ರೀಕರಿಸುವ ಮುನ್ನವೇ ಕ್ಯಾಮೆರಾ ಇಟ್ಟಿದ್ದ ಬ್ಯಾಗ್‌ ಕೆಳಗೆ ಬಿತ್ತು ಎಂದೂ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ನಡುರಾತ್ರಿ ಸಂಭಾಷಣೆ

ಹನಿಟ್ರ್ಯಾಪ್‌ ನೆಪದಲ್ಲಿ ಶಾಸಕರು, ಅಧಿಕಾರಿಗಳನ್ನು ಬ್ಲ್ಯಾಕ್‌ ಮೇಲ್‌ ಮಾಡಿದ ಮಹಿಳೆಯರು, ರಾತ್ರಿ 10 ಗಂಟೆ ಬಳಿಕ ಮೊಬೈಲ್‌ಗೆ ಕರೆ ಮಾಡಿ ನಡುರಾತ್ರಿವರೆಗೂ ಹರಟುತ್ತಿದ್ದರು ಎನ್ನಲಾಗಿದೆ.

ಶಾಸಕರು ಪಾನಮತ್ತರಾಗಿರುವುದನ್ನು ಖಚಿತಪಡಿಸಿಕೊಂಡು ಮಹಿಳೆಯರು ಮಾತಿಗೆಳೆಯುತ್ತಿದ್ದರು. ಮಾತು ದೈಹಿಕ ಸಂಬಂಧಗಳತ್ತ ಹೊರಳುತ್ತಿತ್ತು. ಒಬ್ಬರು ಮೊಬೈಲ್‌ನಲ್ಲಿ ಮಾತನಾಡಿ ವ್ಯವಹಾರ ಕುದುರಿಸುತ್ತಿದ್ದರು. ಮತ್ತೊಬ್ಬರು ಹನಿಟ್ರ್ಯಾಪ್‌ ಕಾರ್ಯಾಚರಣೆಗೆ ಇಳಿಯುತ್ತಿದ್ದರು ಎಂದು ಗೊತ್ತಾಗಿದೆ.

ಸಾಕ್ಷ್ಯ ನಾಶ

ರಾಜ್ಯದ ಕೆಲವು ಅಧಿಕಾರಿಗಳೂ ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿದ್ದು, ಆರೋಪಿಗಳು ವಿಡಿಯೊ ರೆಕಾರ್ಡಿಂಗ್‌, ಮೊಬೈಲ್‌ ಕರೆ ವಿವರ ಮತ್ತು ಸಂಭಾಷಣೆಗಳನ್ನು ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿಜಿಟಲ್‌ ಸಾಕ್ಷ್ಯಗಳನ್ನು ಮರಳಿ ಪಡೆಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇವು ಮರಳಿ ಸಿಕ್ಕರೆ ಇನ್ನಷ್ಟು ಮಂದಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯಿದೆ.

ಎದೆ ಮೇಲೆ ಹಚ್ಚೆ!

ಗದಗ ಜಿಲ್ಲೆಯ ಶಾಸಕರನ್ನು ಹನಿಟ್ರ್ಯಾಪ್‌ಗೆ ಕೆಡವಲು ಮಹಿಳೆ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಫೋಟೊ ಕಳುಹಿಸಿದ್ದರು ಎನ್ನಲಾಗಿದೆ.

‘ನೀವು ಕುಡಿಯುತ್ತೀರಾ; ಮಾಂಸ ತಿನ್ನುತ್ತೀರಾ; ಸಿಗರೇಟು ಸೇದುತ್ತೀರಾ?’ ಎಂದೆಲ್ಲಾ ಮಹಿಳೆ ಕೇಳಿದ್ದರು. ಅದಕ್ಕೆ ಅವರು, ‘ಕುಡಿತದ ಅಭ್ಯಾಸವಿದೆ. ಮಾಂಸ ತಿನ್ನುವುದಿಲ್ಲ’ ಎಂದಿದ್ದರು. ಪ್ರತಿಯಾಗಿ ಶಾಸಕರೂ ಮಹಿಳೆಗೆ, ‘ನೀವು ಕುಡಿಯುತ್ತೀರಾ’ ಎಂದು ಪ್ರಶ್ನಿಸಿದ್ದರು. ‘ನಾನು ಕುಡಿಯುತ್ತೇನೆ; ಸಿಗರೇಟೂ ಸೇದುತ್ತೇನೆ’ ಎಂದು ಮಹಿಳೆ ಉತ್ತರಿಸಿದ್ದರು. ಈ ಸಂಭಾಷಣೆಗಳು ಅವರನ್ನು ಹನಿಟ್ರ್ಯಾಪ್‌ವರೆಗೂ ಕರೆತಂದಿತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.