ADVERTISEMENT

ಈಡೇರಿತು 25 ವರ್ಷಗಳ ಬೇಡಿಕೆ: ಹೊಸಪೇಟೆ–ಹರಿಹರ ಪ್ರಯಾಣಿಕರ ರೈಲು ಸಂಚಾರಕ್ಕೆ ಚಾಲನೆ

ಎರಡುವರೆ ದಶಕಗಳ ಬೇಡಿಕೆ ಕೊನೆಗೂ ಈಡೇರಿತು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 7:21 IST
Last Updated 17 ಅಕ್ಟೋಬರ್ 2019, 7:21 IST
ಹೊಸಪೇಟೆ–ಕೊಟ್ಟೂರು–ಹರಿಹರ ಪ್ರಯಾಣಿಕರ ರೈಲಿಗೆ ಸಚಿವ ಸುರೇಶ ಅಂಗಡಿಯವರು ಗುರುವಾರ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು
ಹೊಸಪೇಟೆ–ಕೊಟ್ಟೂರು–ಹರಿಹರ ಪ್ರಯಾಣಿಕರ ರೈಲಿಗೆ ಸಚಿವ ಸುರೇಶ ಅಂಗಡಿಯವರು ಗುರುವಾರ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು   

ಹೊಸಪೇಟೆ: ಬಹುನಿರೀಕ್ಷಿತ ಹೊಸಪೇಟೆ–ಕೊಟ್ಟೂರು–ಹರಿಹರ ನಡುವೆ ಪ್ರಯಾಣಿಕರ ರೈಲು ಸಂಚಾರ ಗುರುವಾರ ಆರಂಭಗೊಂಡಿತು. ಇದರೊಂದಿಗೆ ಎರಡುವರೆ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಇಲ್ಲಿನ ನಿಲ್ದಾಣದಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

ಈ ರೈಲು ಶುಕ್ರವಾರದಿಂದ (ಅ.18) ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಪ್ರತಿದಿನ ಬೆಳಿಗ್ಗೆ 7.20ಕ್ಕೆ ಹರಿಹರದಿಂದ ಪಯಣ ಬೆಳೆಸುವ ರೈಲು ಅಮರಾವತಿ ಕಾಲೊನಿ, ದಾವಣಗೆರೆ, ತೆಲಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲವಿ, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ವ್ಯಾಸ ಕಾಲೊನಿ, ವ್ಯಾಸನಕೆರಿ, ತುಂಗಭದ್ರಾ ಡ್ಯಾಂ ನಿಲ್ದಾಣದ ಮೂಲಕ ಹಾದು ಮಧ್ಯಾಹ್ನ 12.10ಕ್ಕೆ ನಗರ ತಲುಪಲಿದೆ.

ADVERTISEMENT

ಮಧ್ಯಾಹ್ನ 12.55ಕ್ಕೆ ನಗರದಿಂದ ಹೊರಡುವ ರೈಲು ಬಂದ ಮಾರ್ಗದ ಮೂಲಕವೇ ಸಂಚಾರ ಬೆಳೆಸಿ ಸಂಜೆ 6.30ಕ್ಕೆ ಹರಿಹರ ಸೇರಲಿದೆ. ನಗರದಿಂದ ದಾವಣಗೆರೆಗೆ 155 ಕಿ.ಮೀ. ಅಂತರವಿದೆ.

ನಗರದಿಂದ ವ್ಯಾಸ ಕಾಲೊನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿಗೆ ₹10, ಮಾಲವಿಗೆ ₹15, ಕೊಟ್ಟೂರಿಗೆ ₹20, ಬೆಣ್ಣೆಹಳ್ಳಿ ಹಾಗೂ ಹರಪನಹಳ್ಳಿಗೆ ₹25, ತೆಲಗಿಗೆ ₹30, ದಾವಣಗೆರೆ, ಅಮರಾವತಿ ಕಾಲೊನಿ ಮತ್ತು ಹರಿಹರಕ್ಕೆ ₹35 ದರ ನಿಗದಿಪಡಿಸಲಾಗಿದೆ.

ಬಳಿಕ ಮಾತನಾಡಿದ ಸುರೇಶ ಅಂಗಡಿ, ‘ಈ ರೈಲು ಬಳ್ಳಾರಿ ವರೆಗೆ ವಿಸ್ತರಿಸಬೇಕೆಂಬ ಬೇಡಿಕೆ ಇದ್ದು, ಆದಷ್ಟು ಶೀಘ್ರ ಇದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು’ ಎಂದರು.

ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಜಿ.ಎಂ. ಸಿದ್ದೇಶ್ವರ, ಶಾಸಕ ಜಿ. ಸೋಮಶೇಖರ್‌ ರೆಡ್ಡಿ, ರೈಲ್ವೆ ಇಲಾಖೆಯ ವ್ಯವಸ್ಥಾಪ ನಿರ್ದೇಶಕ ಎ.ಕೆ. ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.