ADVERTISEMENT

ಹಿಂದುಳಿದ ವರ್ಗಗಳ 2.50ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ: ಸಚಿವ ತಂಗಡಗಿ

150 ಹೊಸ ಹಾಸ್ಟೆಲ್‌ಗಳ ಪ್ರಾರಂಭ: ಸಚಿವ ತಂಗಡಗಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 16:08 IST
Last Updated 17 ಡಿಸೆಂಬರ್ 2024, 16:08 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಸುವರ್ಣ ವಿಧಾನಸೌಧ (ಬೆಳಗಾವಿ): ಪ್ರತಿ ವರ್ಷ ಹಿಂದುಳಿದ ವರ್ಗಗಳ 2.50 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ‌ ಶಿವರಾಜ್‌ ತಂಗಡಗಿ ಹೇಳಿದರು.

ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೆಟ್ರಿಕ್‌ ನಂತರದ 150 ವಿದ್ಯಾರ್ಥಿನಿಲಯಗಳ ಪ್ರಾರಂಭಕ್ಕೆ ಆನ್‌ಲೈನ್‌ ಮೂಲಕ ಚಾಲನೆ‌ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರವೇಶ ಕೋರಿ ಅರ್ಜಿ ಸಲ್ಲಿಸುತ್ತಾರೆ. ಹಾಸ್ಟೆಲ್‌ ದೊರಕದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದರು.

ADVERTISEMENT

ಹಾಸ್ಟೆಲ್‌ಗಳ ಮೂಲಸೌಕರ್ಯ, ಪುಸ್ತಕ, ಗ್ರಂಥಾಲಯಗಳಿಗೂ ಆದ್ಯತೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಆಹಾರ, ಹಾಸ್ಟೆಲ್‌ಗಳ ನವೀಕರಣ, ಪುಸ್ತಕ ವಿತರಣೆ, ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಹಿಂದುಳಿದ‌ ವರ್ಗದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಇಂದು ಸಿದ್ದರಾಮಯ್ಯ ಅವರು ನೆರವಾಗುತ್ತಿದ್ದಾರೆ ಎಂದರು.

ಹಲವು ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯ, ವಿದ್ಯಾಸಿರಿ ಯೋಜನೆಯ ನೆರವಿನಿಂದ ಶಿಕ್ಷಣ ಪಡೆದ ಅನುಭವ ಹಂಚಿಕೊಂಡರು.

ಇಲಾಖೆಯ ಕಾರ್ಯದರ್ಶಿ ಸಂಜಯ್‌ ಶೆಟ್ಟಣ್ಣನವರ್, ಆಯುಕ್ತ ಶ್ರೀನಿವಾಸ್, ಜಂಟಿ ನಿರ್ದೇಶಕ ಜಿ. ಜಗದೀಶ್, ಸಿ.ಕೆ.ಜಗದೀಶ್‌ ಕುಮಾರ್, ಪ್ರದೀಪ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.