ADVERTISEMENT

ಹೆಣ್ಣು ಮಕ್ಕಳಿಗೆ ಹಾಸ್ಟೆಲ್‌ಗಳಲ್ಲಿ ಸುರಕ್ಷತೆ ಇಲ್ಲ: ವರದಿ

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 21:18 IST
Last Updated 22 ಆಗಸ್ಟ್ 2025, 21:18 IST
<div class="paragraphs"><p>ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)</p></div>

ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)

   

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. 10–12 ವರ್ಷಗಳಿಂದ ಅಪಾಯಕಾರಿ ಹಂತದಲ್ಲಿದೆ ಎಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಎರಡನೇ ವರದಿ ಅಭಿಪ್ರಾಯಪಟ್ಟಿದೆ.

ಸಮಿತಿ ಅಧ್ಯಕ್ಷ ಎ.ಆರ್‌.ಕೃಷ್ಣಮೂರ್ತಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಸಮಿತಿಯ ಎರಡನೇ ವರದಿಯನ್ನು ಮಂಡಿಸಿದರು.

ADVERTISEMENT

‘ಹೆಣ್ಣು ಮಕ್ಕಳನ್ನು ತಂದೆ– ತಾಯಿಗಳು ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳಲು ವಿಶ್ವಾಸದಿಂದ ಬಿಡುತ್ತಾರೆ. ಆದರೆ ಅಲ್ಲಿ ಅವರಿಗೆ ಸುರಕ್ಷತೆಯೇ ಇಲ್ಲದಿದ್ದರೆ ಹೇಗೆ? ಇವು ಒಂದು ಗಂಡಾಂತರ ಸ್ಥಿತಿ ತಲುಪಿವೆ. ನಮ್ಮ ಮಕ್ಕಳು ಅಪಾಯದಲ್ಲಿದ್ದಾರೆ. ಮೂಲಸೌಕರ್ಯ ಕಳಪೆ ಇದ್ದರೆ ಅದು ಬೇರೆ ವಿಷಯ. ಆದರೆ, ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ. ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲ ಎಂದರೆ ಹೇಗೆ’ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

‘ಹಾಸ್ಟೆಲ್‌ಗಳಲ್ಲಿ 10 ರಿಂದ 12 ಶೌಚಾಲಯಗಳನ್ನು ಸ್ವಚ್ಛ ಮಾಡಲು ತಿಂಗಳಿಗೆ ಕೇವಲ ₹1,000 ನೀಡಲಾಗುತ್ತಿದೆ. ಒಂದು ಹಾಸ್ಟೆಲ್‌ನಲ್ಲಿ ಕನಿಷ್ಠವೆಂದರೆ 50 ವಿದ್ಯಾರ್ಥಿಗಳಿರುತ್ತಾರೆ. ಕೇವಲ ₹1,000ಕ್ಕೆ ಯಾರು ಬರುತ್ತಾರೆ? ಸೋಪ್‌, ಫಿನಾಯಿಲ್‌ ಮುಂತಾದ ವಸ್ತುಗಳನ್ನು ತೆಗೆದುಕೊಳ್ಳಲು ₹500 ಕೊಡುತ್ತಾರೆ. ಬಾಲಕಿಯರ ಹಾಸ್ಟೆಲ್‌ನಲ್ಲಿ ವಾಚ್‌ಮನ್ ಇರುತ್ತಾರೆ. ಬಾಲಕರ ಹಾಸ್ಟೆಲ್‌ಗಳಲ್ಲಿ ವಾಚ್‌ಮನ್ ಇರುವುದಿಲ್ಲ. ಈ ಹಾಸ್ಟೆಲ್‌ಗಳು ಡ್ರಗ್‌ ಪೆಡ್ಲರ್‌ ಸೆಂಟರ್‌ ರೀತಿ ಆಗಿವೆ. ಒಳಗೆ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ’ ಎಂದು ಇಲಾಖಾ ಆಯುಕ್ತರು ಸಮಿತಿಗೆ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

‘ಹಾಸ್ಟೆಲ್‌ ವಾರ್ಡನ್‌ ಹುದ್ದೆಗಳು ಶೇ 50 ರಷ್ಟು ಖಾಲಿ ಇವೆ.  ಕೆಲವು ಸಂದರ್ಭಗಳಲ್ಲಿ ಹಿರಿಯ ಬಾಣಸಿಗರನ್ನೇ  ವಾರ್ಡನ್‌ ಮಾಡಲಾಗಿದೆ. ಎಷ್ಟೋ ಕಡೆ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಅಧಿಕಾರಿಗಳೂ ಇಲ್ಲ. ಬೇರೆಯವರಿಗೆ ಉಸ್ತುವಾರಿ ನೀಡಲಾಗಿರುತ್ತದೆ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.