ADVERTISEMENT

ಹುಬ್ಬಳ್ಳಿ ಗಲಭೆ– ಜನರನ್ನು ಸೇರಿಸಿದ್ದು ನಾನೇ ಎಂದ ವಸೀಂ ಪಠಾಣ್

ತನಿಖಾಧಿಕಾರಿಗಳ ಮುಂದೆ ಗಲಭೆ ಪ್ರಕರಣದ ವಿವರ ಬಿಚ್ಚಿಟ್ಟ ಆರೋಪಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 18:48 IST
Last Updated 22 ಏಪ್ರಿಲ್ 2022, 18:48 IST
ವಸೀಂ ಪಠಾಣ್
ವಸೀಂ ಪಠಾಣ್   

ಹುಬ್ಬಳ್ಳಿ: ‘ಗಲಭೆ ನಡೆದ ದಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಜನರನ್ನು ಸೇರಿಸಿದ್ದು ನಾನೇ...’ ಎಂದು ನಗರದಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ವಸೀಂ ಪಠಾಣ್ ತನಿಖಾಧಿಕಾರಿಗಳ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಘಟನೆ ಕುರಿತು ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಆರೋಪಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾನೆ.

‘ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ಅನಿಮೆಟೆಡ್ ವಿಡಿಯೊ ಮನಕೆರಳಿಸಿತ್ತು. ಅದನ್ನು ಖಂಡಿಸಿ ಠಾಣೆ ಎದುರು ಪ್ರತಿ
ಭಟನೆ ಮಾಡಲು ಸಹಚರ ತುಫೈಲ್ ಮುಲ್ಲಾ ಮತ್ತು ರೌಡಿ ಶೀಟರ್ ಅಬ್ದುಲ್ ಮಲಿಕ್ ಬೇಪಾರಿಯೊಂದಿಗೆ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದೆ’ ಎಂದು ತಿಳಿಸಿದ್ದಾನೆ.

ADVERTISEMENT

‘ಪೊಲೀಸರು ಪ್ರತಿಭಟನೆಗೆ ಬಗ್ಗದಿದ್ದರೆ, ಗಲಾಟೆ ಮಾಡೋಣ ಎಂದಿದ್ದೆ. ಗಲಭೆ ಮಾಡುವ ಉದ್ದೇಶವಿರಲಿಲ್ಲ. ಪ್ರಚೋದನೆ ನೀಡಿಲ್ಲ. ಅಷ್ಟೊಂದು ಪ್ರಮಾಣದ ಕಲ್ಲುಗಳನ್ನು ಯಾರು ತಂದರು ಎಂಬುದು ಗೊತ್ತಿಲ್ಲ. ಗಲಭೆಯ ಸೂತ್ರಧಾರ ಎಂದು ಬಿಂಬಿಸತೊಡಗಿದ್ದರಿಂದ, ಜೀವ ಭಯ ಇದೆ ಎಂದು ನಮ್ಮವರು ಹೇಳಿದ್ದರಿಂದ ತಪ್ಪಿಸಿಕೊಂಡು ಓಡಾಡಬೇಕಾಯಿತು’ ಎಂದಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಮುಸ್ಲಿಂ ಮೂಲಭೂತ ಸಂಘಟನೆಗಳ ಜತೆಗೆ ನಂಟಿದೆಯೇ ಎಂಬ ದಿಕ್ಕಿನಲ್ಲಿಯೂ ಪೊಲೀಸ್‌ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.ಆಕ್ಷೇಪಾರ್ಹ ಸ್ಟೇಟಸ್ ಹಾಕಿದ್ದ ಕೆಲವೇ ಗಂಟೆಗಳಲ್ಲಿ ಅಷ್ಟೊಂದು ಜನರು ಸೇರಿದ್ದು, ದೇವಸ್ಥಾನದ ಮೇಲೆ ದಾಳಿ ನಡೆಸಿದ್ದೆಲ್ಲವನ್ನೂ ಪರಿಗಣಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

‘ವಸೀಂ ಪಠಾಣ್, ರಝಾ ಅಕಾಡೆಮಿ ಎಂಬ ಮುಸ್ಲಿಂ ಮೂಲಭೂತವಾದಿ ಸಂಘಟನೆಯವನಾಗಿದ್ದು, ರೀಬಿಲ್ಟ್ ಬಾಬ್ರಿ ಮಸೀದಿ ಸಂಘಟನೆ ಮಾಡಿಕೊಂಡಿದ್ದಾನೆ’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಹುಬ್ಬಳ್ಳಿಯಲ್ಲಿ ಶುಕ್ರವಾರ ಆರೋಪಿಸಿದ್ದಾರೆ.

ಪೊಲೀಸ್ ವಶಕ್ಕೆ: ವಸೀಂ ಮತ್ತು ತುಫೈಲ್‌ನನ್ನು ಶುಕ್ರವಾರ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸ
ಲಾಯಿತು. ನ್ಯಾಯಾಲಯ, ಇಬ್ಬರನ್ನು ಐದು ದಿನ ಪೊಲೀಸ್ ವಶಕ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.