ADVERTISEMENT

ಮಾನವನ ಆರೋಗ್ಯ, ಪರಿಸರಕ್ಕೆ ಅಪಾಯ

ಡಾ.ಸ್ವಾತಿ ರಾಜಗೋಪಾಲ್‌
Published 25 ಮೇ 2019, 20:00 IST
Last Updated 25 ಮೇ 2019, 20:00 IST
   

ಜೈವಿಕ ವೈದ್ಯಕೀಯ ತ್ಯಾಜ್ಯ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಉಂಟುಮಾಡುತ್ತಿರುವ ಕಾರಣ ಅದು ಇಂದು ಬಹಳ ದೊಡ್ಡ ಆತಂಕದ ವಿಚಾರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ ಆರೋಗ್ಯ ಸೇವಾ ಕೇಂದ್ರಗಳಿಂದ ಉತ್ಪತ್ತಿಯಾಗುವ ಶೇ 85ರಷ್ಟು ವೈದ್ಯಕೀಯ ತ್ಯಾಜ್ಯಗಳು ಅಪಾಯಕಾರಿಯಲ್ಲ. ಆದರೆ ಉಳಿದ ಶೇ 15ರಷ್ಟು ತ್ಯಾಜ್ಯ ಹೆಚ್ಚು ಅಪಾಯಕಾರಿ. ಇವುಗಳು ನಂಜು ಉಂಟುಮಾಡಬಹುದು,ವಿಷಕಾರಿಯಾಗಬಹುದು ಮತ್ತು ಅಣು ವಿಕಿರಣ ಉಂಟುಮಾಡಬಹುದು. ಆದ್ದರಿಂದಲೇ ಇಂದು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಆಗ್ರಹ ಮಹತ್ವ ಪಡೆದಿದೆ. ಇಲ್ಲವಾದರೆ ಇಂತಹ ತ್ಯಾಜ್ಯಗಳಿಂದ ರೋಗಿಗಳು, ಆರೋಗ್ಯ ಕಾಳಜಿ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಪರಿಸರಕ್ಕೆ ದೊಡ್ಡ ಅಪಾಯ ತಪ್ಪಿದ್ದಲ್ಲ.

ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ಬ್ಯಾಕ್ಟೀರಿಯಾ ಶೇಖರಣೆಗೊಂಡು ಜನರಿಗೆ ಹರಡುವ ಸಾಧ್ಯತೆ ಇರುತ್ತದೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಸೋಂಕು ತಗುಲುವ ಅಪಾಯ ಇದೆ. ಸರಿಯಾಗಿ ವರ್ಗೀಕರಿಸದೆ ಕಸದ ತೊಟ್ಟಿಯಲ್ಲಿ ಹಾಕಿದರೆ ಹಾನಿಕಾರಕ ಸೂಕ್ಷ್ಮ ಜೀವಿಗಳು ನೀರು ಪೂರೈಕೆ ವ್ಯವಸ್ಥೆಯೊಂದಿಗೆ ಮಲಿನಗೊಳ್ಳಬಹುದು. ಡಬ್ಲ್ಯುಎಚ್‌ಒ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ 16 ಶತಕೋಟಿ ಇಂಜೆಕ್ಷನ್‌ಗಳನ್ನು ರೋಗಿಗಳಿಗೆ ಚುಚ್ಚಲಾಗುತ್ತಿದೆ. ಆದರೆ ಈ ಎಲ್ಲ ಸೂಜಿಗಳು ಮತ್ತು ಸಿರಿಂಜ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಿಲ್ಲ. ಇದರಿಂದ ತೀವ್ರ ಗಾಯವಾಗುವ ಹಾಗೂ ಇವುಗಳ ಮರು ಬಳಕೆಯಿಂದ ಎಚ್‌ಐವಿ, ಹೆಪಟೈಟಸ್‌ ಬಿ., ಹೆಪಟೈಟಸ್‌ ಸಿ ನಂತಹ ವೈರಸ್‌ಗಳು ತಗುಲುವ ಅಪಾಯ ಇದೆ.

ವೈದ್ಯಕೀಯ ತ್ಯಾಜ್ಯಗಳನ್ನು ಸುಟ್ಟು ಹಾಕುವುದು ಪರಿಹಾರವೇ ಅಲ್ಲ. ಹೀಗೆ ಉರಿಸುವುದರಿಂದಲೂ ವಾತಾವರಣಕ್ಕೆ ಡಯಾಕ್ಸಿನ್‌, ಫರಾನ್‌, ಇತರ ವಿಷಕಾರಿ ಕಣಗಳು ಬಿಡುಗಡೆಗೊಳ್ಳುತ್ತವೆ. ಈ ತ್ಯಾಜ್ಯಗಳನ್ನು ಸುಡುವುದರಿಂದ ಔಷಧ ನಿರೋಧಕ ಸೂಕ್ಷ್ಮಜೀವಿಗಳಂತಹ ರಾಸಾಯನಿಕ ಮತ್ತು ಜೈವಿಕ ಅಪಾಯಗಳು ವಾತಾವರಣಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ADVERTISEMENT

ವೈದ್ಯಕೀಯ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮಹತ್ವವನ್ನು ಅರಿತ ಕೇಂದ್ರ ಸರ್ಕಾರ 1998ರಲ್ಲಿ ಅಧಿಸೂಚನೆ ಹೊರಡಿಸಿ, ಆಸ್ಪತ್ರೆಯ ಸ್ವಚ್ಛತೆ ಮತ್ತು ನಿರ್ವಹಣಾ ಚಟುವಟಿಕೆಯಲ್ಲಿ ಆಸ್ಪತ್ರೆ ತ್ಯಾಜ್ಯ ನಿರ್ವಹಣೆಯನ್ನೂ ಸೇರಿಸಿಬಿಟ್ಟಿದೆ. ತ್ಯಾಜ್ಯ ಸಂಗ್ರಹ, ವಿಂಗಡಣೆ, ಸುರಕ್ಷಿತ ಸಾಗಣೆ, ಸೂಕ್ತ ನಿರ್ವಹಣೆ, ವಿಲೇವಾರಿ ಸ್ಥಳಕ್ಕೆ ಸಾಗಣೆ ಹಾಗೂ ಅಂತಿಮವಾಗಿ ತ್ಯಾಜ್ಯ ವಿಲೇವಾರಿಗಳೆಂಬ ಆರು ಹಂತಗಳಿವೆ. ಇವುಗಳು ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಯ ಅವಿಭಾಜ್ಯ ಅಂಗಗಳು.

ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಸ್ಪತ್ರೆಗಳು ಕಾರ್ಯತಂತ್ರ ರೂಪಿಸುವ ಪ್ರಯತ್ನದಲ್ಲಿವೆ. ವೈದ್ಯಕೀಯ ತ್ಯಾಜ್ಯವನ್ನು ಸುಡುವ ಹಳೇ ಪದ್ಧತಿ ಬದಲಿಸಿ, ಆಟೋಕ್ಲೇವಿಂಗ್‌, ಮೈಕ್ರೋ ವೇವಿಂಗ್‌, ಸ್ಟೀಮ್‌ ಟ್ರೀಟ್‌ಮೆಂಟ್‌ ಜತೆಗೆ ಆಂತರಿಕ ಮಿಶ್ರಣಗೊಳಿಸುವಿಕೆ, ರಾಸಾಯನಿಕ ನಿರ್ವಹಣೆಯಂತಹ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಕ್ರಮಗಳು ನಡೆದಿವೆ.

ಇದೊಂದು ದೀರ್ಘಾವಧಿ ಪ್ರಕ್ರಿಯೆಯಾದರೂ, ಸಂಪನ್ಮೂಲಗಳ ವಿಂಗಡನೆ, ನಿಭಾಯಿಸುವಿಕೆ ಮತ್ತು ವಿಲೇವಾರಿ ವಿಚಾರದಲ್ಲಿ ಸ್ಪಷ್ಟವ್ಯವಸ್ಥೆ‌ ರೂಪಿಸುವುದು ಅತ್ಯಂತ ಅಗತ್ಯ. ವೈದ್ಯಕೀಯ ತ್ಯಾಜ್ಯಗಳನ್ನು ಯಶಸ್ವಿ ಯಾಗಿ ಪ್ರತ್ಯೇಕಗೊಳಿಬೇಕಿದ್ದರೆ ಅವುಗಳನ್ನು ಹೇಗೆ ವಿಭಾಗಿಸಬಹುದು ಎಂಬುದನ್ನೂ ತಿಳಿದುಕೊಳ್ಳಬೇಕು. ಡಬ್ಲ್ಯುಎಚ್‌ಒ ಪ್ರಕಾರ ಎಂಟು ಬಗೆಯಲ್ಲಿ ಈ ತ್ಯಾಜ್ಯಗಳನ್ನು ವಿಂಗಡಿಸಬಹುದು. ಅವುಗಳೆಂದರೆ ಜನರಲ್‌, ಪೆಥಾಲಾಜಿಕಲ್, ರೇಡಿಯೋ ಆಕ್ಟೀವ್‌, ಕೆಮಿಕಲ್‌, ಇನ್‌ಫೆಕ್ಷಿಯಸ್‌, ಶಾರ್ಪ್ಸ್‌, ಫರ್ಮಾಸ್ಯುಟಿಕಲ್ಸ್‌ ಹಾಗೂ ಪ್ರೆಷರೈಸ್ಡ್‌ಕಂಟೈನರ್‌ ವೇಸ್ಟ್‌.

ವೈದ್ಯಕೀಯ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆಯಿಂದ ಆಗುವ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ತ್ಯಾಜ್ಯಗಳನ್ನು ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದು ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಅನುಸರಿಸಬಹುದಾದ ಮೊದಲ ಮೆಟ್ಟಿಲು. ಆಸ್ಪತ್ರೆಗಳು ಇಂದು ತ್ಯಾಜ್ಯಗಳ ನಿರ್ವಹಣೆಗೆ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ.

ವೈದ್ಯಕೀಯ ಕಾಳಜಿ ನಮ್ಮ ಜೀವ ಮತ್ತು ಆರೋಗ್ಯಕ್ಕೆ ಬಹಳ ಮುಖ್ಯ. ಹೀಗಾಗಿ ಕೆಲಸಗಾರರಿಗೆ, ರೋಗಿಗಳಿಗೆ ಮಾತ್ರವಲ್ಲ ಸಾರ್ವಜನಿಕರಲ್ಲೂ ಸುರಕ್ಷಿತ, ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಬೇಕು.

(ಲೇಖಕರು ಬೆಂಗಳೂರಿನ ಏಸ್ಟರ್‌ ಸಿಎಂಐ ಆಸ್ಪತ್ರೆಯ ಸೋಂಕು ಕಾಯಿಲೆಗಳ ತಜ್ಞರು)

-ಅನುವಾದ ಎಂ.ಜಿ.ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.