ADVERTISEMENT

ಹಿಗ್ಗಿದ ಹಸಿವು: ತಗ್ಗಿದ ಉದ್ಯಮ

ರಾಜ್ಯ ಯೋಜನಾ ಮಂಡಳಿ ವರದಿ ಪ್ರಕಟ l ಸುಸ್ಥಿರ ಅಭಿವೃದ್ಧಿ ಗುರಿ–ಕುಸಿದ ಕರ್ನಾಟಕದ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 3:11 IST
Last Updated 11 ಜನವರಿ 2020, 3:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ‘ಹಸಿವು ಮುಕ್ತ ಕರ್ನಾಟಕ’, ‘ಅಭಿವೃದ್ಧಿಯೇ ಮಂತ್ರ’ ಎಂಬುದು ಘೋಷಣೆಗಳಾಗಿಯೇ ಉಳಿದಿದ್ದು, ಒಂದು ವರ್ಷದಿಂದೀಚೆಗೆ ಹಸಿವು ಹೆಚ್ಚಳವಾಗಿದೆ. ಕೈಗಾರಿಕಾ ಅಭಿವೃದ್ಧಿಯಲ್ಲಿ ಗಮನಾರ್ಹ ಕುಸಿತ ಕಂಡಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ವರದಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ‘ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್‌ಡಿಜಿ) ಕರ್ನಾಟಕದ ಸಾಧನೆ’ ಕುರಿತ ದಾಖಲೆ ಬಿಡುಗಡೆ ಮಾಡಿದರು.

ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಸುಸ್ಥಿರ ಅಭಿವೃದ್ಧಿಯ ರ್‍ಯಾಂಕ್‌ನಲ್ಲಿ 2018ಕ್ಕೆ ಹೋಲಿಸಿದರೆ 2019ರಲ್ಲಿ ಯಾವ ಸ್ಥಾನದಲ್ಲಿ ರಾಜ್ಯ ಇದೆ ಎಂಬ ವಿವರಗಳು ಈ ದಾಖಲೆಯಲ್ಲಿವೆ.

ADVERTISEMENT

‘2016ರ ಜನವರಿ 1ರಿಂದ ಎಸ್‌ಡಿಜಿ–2030 ಆರಂಭವಾಗಿದ್ದು, ನಿಗದಿಪಡಿಸಲಾದ 16 ಗುರಿಗಳ ಒಟ್ಟಾರೆ ಸಾಧನೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಸ್ಥಾನ 7ರಿಂದ 6ಕ್ಕೆ ಏರಿದೆ. ಆದರೆ ನಗರಾಭಿವೃದ್ಧಿ, ಸೌಲಭ್ಯಗಳು, ಶಾಂತಿ ಕಾಪಾಡುವಿಕೆ, ನ್ಯಾಯ ಪಾಲನೆ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ರಾಜ್ಯ ಹಿಂದೆ ಬಿದ್ದಿದೆ’ ಎಂದು ಪುಟ್ಟಸ್ವಾಮಿ ಮಾಹಿತಿ ನೀಡಿದರು.

ಈ ಹಿನ್ನಡೆಯಿಂದಾಗಿ ನೀತಿ ಆಯೋಗದ ವರದಿಯಲ್ಲೂ ರಾಜ್ಯದ ಕ್ರಮಾಂಕ ಕುಸಿದಿದೆ. ಹಸಿವು ಮುಕ್ತವಾಗಿಸುವ ಗುರಿಯಲ್ಲಿ ಕಳೆದ ವರ್ಷ ದೊರೆತಿದ್ದ 54 ಅಂಕ ಈ ಬಾರಿ 37ಕ್ಕೆ ಕುಸಿದಿದೆ. ಉದ್ಯಮದ ಕ್ರಮಾಂಕ 57ರಿಂದ 40ಕ್ಕೆ ಇಳಿದಿದೆ.

ಈ ಹಿನ್ನಡೆಯ ಜತೆಯಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಾಕಿಕೊಂಡಿರವ ವಿಷನ್–2020 ಗುರಿಗಳಾದಲಿಂಗಾನುಪಾತ, ಶಿಶು ಚುಚ್ಚುಮದ್ದು, 5 ವರ್ಷದೊಳಗಿನ ಶಿಶು ಮರಣ, ಗ್ರಾಮೀಣ ಬಡತನ ಮಟ್ಟ, ಧಾನ್ಯ ಇಳುವರಿ ಮೊದಲಾದವನ್ನು ಸಾಧಿಸುವುದೂ ಸಾಧ್ಯವಾಗಿಲ್ಲ.

‘ಬಡವರ ಬಂಧು’ ಯೋಜನೆಯಲ್ಲಿ ಬದಲಾವಣೆ ಸಹಿತ ಹಲವಾರು ಸಲಹೆಗಳನ್ನು ಜಾರಿಗೆ ತರುವುದು ಹಾಗೂ ಏಕಗವಾಕ್ಷಿ ಏಜೆನ್ಸಿ ಮೂಲಕ ಜನರಲ್ಲಿ ಸರ್ಕಾರದ ಕಾರ್ಯಕ್ರಮಗಳು, ತಂತ್ರಜ್ಞಾನ, ಯೋಜನೆಗಳ ಬಗ್ಗೆ ಅರಿವು, ಕೌಶಲಾಭಿವೃದ್ಧಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಂಡಳಿಯ ಕೆಲವು ಪ್ರಸ್ತಾವಗಳು

*10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಗ್ರಾಮ ಪಂಚಾಯಿತಿಗೆ ಅಥವಾ ಕರ್ನಾಟಕ ಪಬ್ಲಿಕ್‌ ಶಾಲೆಗೆ ವರ್ಗಾಯಿಸಿ ವಾಹನ ಸೌಲಭ್ಯ ಕಲ್ಪಿಸುವುದು

*ರಾಯಚೂರು, ಯಾದಗಿರಿ ಜಿಲ್ಲೆಗಳು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಪರಿಗಣನೆ, ಯಾದಗಿರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅಂದಾಜು ಪಟ್ಟಿ ನೀಡುವುದು

*ನೀರು ಸಂಗ್ರಹಿಸಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಗುಜರಾತ್‌ ಮಾದರಿ ಅನುಕರಣೆ ಮಾಡುವುದು

*ಸುಸ್ಥಿರ ಅಭಿವೃದ್ಧಿ ಮತ್ತು ವಿಷನ್‌–2020ಯಲ್ಲಿ ಇದುವರೆಗೂ ಸೇರದೆ ಇರುವ ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು 2020–21ನೇ ಸಾಲಿಗೆ ಅನುದಾನಕ್ಕೆ ವಾರದೊಳಗೆ ಪ್ರಸ್ತಾವನೆ ಸಲ್ಲಿಸುವುದು

*ಸ್ವಂತ ಸೂರು ಇಲ್ಲದ ಕುಟುಂಬಗಳಿಗೆ ಆಶ್ರಯ ಯೋಜನೆಯ ಸೌಲಭ್ಯ

*ಸ್ವಂತ ಮನೆ ಹೊಂದಲು ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಆರ್ಥಿಕ ನೆರವು ಕಲ್ಪಿಸುವುದು.

***

ಬಜೆಟ್‌ಗೆ ಪೂರ್ವಭಾವಿಯಾಗಿ ಎರಡು ದಿನದಲ್ಲಿ 19 ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದೇನೆ. ಕೊರತೆ ಸರಿಪಡಿಸಿ ರಾಜ್ಯವನ್ನು ಮುಂಚೂಣಿಗೆ ತರಲು ಪ್ರಯತ್ನಿಸುತ್ತೇನೆ

-ಬಿ.ಜೆ.ಪುಟ್ಟಸ್ವಾಮಿ, ಉಪಾಧ್ಯಕ್ಷ ರಾಜ್ಯ ಯೋಜನಾ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.