ADVERTISEMENT

ಹುಣಸೋಡು ಸ್ಫೋಟ ದುರಂತ: ದೋಷಾರೋಪ ಪಟ್ಟಿ ರದ್ದು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 15:53 IST
Last Updated 15 ನವೆಂಬರ್ 2023, 15:53 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಶಿವಮೊಗ್ಗ ಗ್ರಾಮೀಣ ಪ್ರದೇಶದ ಹುಣಸೋಡು ವ್ಯಾಪ್ತಿಯಲ್ಲಿ ನಡೆದಿದ್ದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿನ ಸ್ಫೋಟ ಪ್ರಕರಣದ ಮೂವರು ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

‘ಪ್ರಕರಣವನ್ನು ರದ್ದುಪಡಿಸಬೇಕು‘ ಎಂದು ಕೋರಿ, ‘ಸುಪ್ರೀಂ ಟ್ರೇಡರ್ಸ್‌‘ ಮಾಲೀಕ ಆಂಧ್ರಪ್ರದೇಶದ ಅನಂತಪುರದ ಮಂಜುನಾಥ ಸಾಯಿ (36), ‘ಪೃಥ್ವಿ ಎಂಟರ್‌ಪ್ರೈಸಸ್‌‘ ಮಾಲೀಕ ಪಿ.ಪೃಥ್ವಿನಾಥ ಸಾಯಿ (34) ಮತ್ತು ಶಿವಮೊಗ್ಗದ ಬಿ.ವಿ.ಸುಧಾಕರ (57) (ಕ್ವಾರಿ ಗುತ್ತಿಗೆ ಪಡೆದಿದ್ದವರು) ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

‘ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮುಂದುವರಿದ ತನಿಖೆ ನಡೆಸಿ ಕಾನೂನು ಪ್ರಕಾರ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಸ್ವತಂತ್ರರಿದ್ದಾರೆ‘ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಆರ್‌.ರಂಗನಾಥ ರೆಡ್ಡಿ ಮತ್ತು ಸಿ.ಎಚ್‌.ಹನುಮಂತರಾಯ, ’ಈ ಅಪರಾಧ ಪ್ರಕರಣ ಮೊದಲಿಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಪೂರ್ವವಲಯದ ಐಜಿಪಿ ಇದನ್ನು ‘ಸೆನ್‌‘ (ಸೈಬರ್, ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌ ಕ್ರೈಂ) ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಐಪಿಸಿ, ಸ್ಫೋಟಕ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಯನ್ನು ಈ ರೀತಿ ಸೆನ್‌ಗೆ ವರ್ಗಾವಣೆ ಮಾಡುವ ಅಧಿಕಾರವು ಡಿಜಿ ಮತ್ತು ಐಜಿಪಿ, ರಾಜ್ಯ ಸರ್ಕಾರ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳನ್ನು ಹೊರತುಪಡಿಸಿ ಇತರರಿಗೆ ಇರುವುದಿಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ಐಜಿಪಿ ನಿರ್ಧಾರವು ಕಾನೂನು ಬಾಹಿರವಾಗಿದ್ದು ದೋಷಾರೋಪ ಪಟ್ಟಿ ರದ್ದುಪಡಿಸಬೇಕು‘ ಎಂದು ಮನವಿ ಮಾಡಿದ್ದರು.

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಕಾನೂನಿನಲ್ಲಿನ ತಾಂತ್ರಿಕ ಅಂಶದ ನ್ಯೂನತೆಯ ಆಧಾರದಡಿ 2, 3 ಮತ್ತು 10ನೇ ಆರೋಪಿಗಳಾದ ಕ್ರಮವಾಗಿ ಮಂಜುನಾಥ ಸಾಯಿ, ಪೃಥ್ವಿ ಸಾಯಿ ಹಾಗೂ ಸುಧಾಕರ ವಿರುದ್ಧ ಶಿವಮೊಗ್ಗ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿದೆ.

ಪ್ರಕರಣವೇನು?: ಶಿವಮೊಗ್ಗ ನಗರ ಹೊರವಲಯದ ಹುಣಸೋಡು ಬಳಿ 2021ರ ಜನವರಿ 21ರಂದು ರಾತ್ರಿ ಭಾರಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಏಳು ಜನ ಮೃತಪಟ್ಟಿದ್ದರು. ‘ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಜಿಲೆಟಿನ್‌ ಕಡ್ಡಿಗಳು ಮತ್ತು ಸಿಡಿಮದ್ದುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಕ್ರಷರ್‌ ಪ್ರದೇಶದಲ್ಲಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ‘ ಎಂದು ಆರೋಪಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.