ADVERTISEMENT

ಹೈ–ಕ, ಕರಾವಳಿಯಲ್ಲಿ ಉತ್ತಮ ಮಳೆ

ರೈತರ ಮೊಗದಲ್ಲಿ ಮಂದಹಾಸ: ಉತ್ತರ ಕರ್ನಾಟಕ ಭಾಗದಲ್ಲಿ ಕಡಿಮೆಯಾದ ಬಿಸಿಲಿನ ತಾಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
ಕಲಬುರ್ಗಿಯಲ್ಲಿ ಸೋಮವಾರ ಸುರಿದ ಮಳೆಯಲ್ಲಿಯೇ ಯುವತಿಯೊಬ್ಬರು ಸ್ಕೂಟರ್‌ನಲ್ಲಿ ಸಾಗಿದರು
ಕಲಬುರ್ಗಿಯಲ್ಲಿ ಸೋಮವಾರ ಸುರಿದ ಮಳೆಯಲ್ಲಿಯೇ ಯುವತಿಯೊಬ್ಬರು ಸ್ಕೂಟರ್‌ನಲ್ಲಿ ಸಾಗಿದರು   

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಉತ್ತಮವಾದ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭಿಸಲು ರೈತರಿಗೆ ಸಹಾಯವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಬಿಸಿಲಿನ ತಾಪ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಕಲಬುರ್ಗಿ, ರಾಯಚೂರು, ಕೊಪ್ಪಳ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧೆಡೆ ಸೋಮವಾರ ಮಳೆ ಸುರಿಯಿತು. ಕಲಬುರ್ಗಿ ನಗರ, ಚಿಂಚೋಳಿ ತಾಲ್ಲೂಕಿನ ಕೊಂಚಾವರಂ, ಕಾಳಗಿ ಹಾಗೂ ಆಳಂದ ತಾಲ್ಲೂಕಿನಲ್ಲಿ ಸಂಜೆ ಉತ್ತಮ ಮಳೆಯಾಯಿತು.

ADVERTISEMENT

ಸೇಡಂ ತಾಲ್ಲೂಕಿನ ಕೋಡ್ಲಾ, ಮಳಖೇಡ, ನೀಲಹಳ್ಳಿ, ಊಡಗಿ, ತೊಟ್ನಳ್ಳಿ, ಶೆಟ್ಟಿಹೂಡಾ, ಅಳ್ಳೊಳ್ಳಿ, ಬೆನಕನಹಳ್ಳಿ, ಹುಳಗೋಳ, ಹಂದರಕಿ, ಮೈಲವಾರ, ರಂಜೋಳ, ಸಿಂಧನಮಡು ಗ್ರಾಮಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.

ಬೀದರ್‌ ಜಿಲ್ಲೆ ಹುಮನಾಬಾದ್ ಪಟ್ಟಣ, ಹಳ್ಳಿಖೇಡ (ಬಿ), ಗಡವಂತಿ, ಧುಮನಸೂರ್, ಮೋಳಕೇರಾ, ಜನತಾನಗರ, ಹುಡಗಿ, ನಂದಗಾಂವ, ನಂದಗಾವ (ವಾಡಿ) ಗ್ರಾಮದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಯಿತು. ಬೀದರ್‌ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು.

ಕರಾವಳಿ, ಕಾಫಿನಾಡಿನಲ್ಲಿ ಮಳೆ: ಕರಾವಳಿ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ತಡರಾತ್ರಿ ಹಾಗೂ ಸೋಮವಾರ ಮುಂಜಾನೆ ಮಳೆಯಾಗಿದೆ.

ಮಂಗಳೂರು ಹಾಗೂ ಉಡುಪಿ ನಗರದಲ್ಲಿ ಬಿರುಸಿನ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಮಳೆಗೆ ಹರಿಹರ-ನಡುಗಲ್ಲು ರಸ್ತೆ ಮಧ್ಯೆ ಮಲ್ಲಾರ ಎಂಬಲ್ಲಿ ಮರವೊಂದು ರಸ್ತೆ ಮೇಲೆ ಉರುಳಿ ರಸ್ತೆ ಬಿದ್ದು ಸೋಮವಾರ ಬೆಳಗ್ಗಿನ ಸಮಯದಲ್ಲಿ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ವಿಟ್ಲದ ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿಯಲ್ಲಿ ಭಾರಿ ಗಾಳಿ, ಮಳೆಗೆ ಕೋಳಿ ಫಾರಂ ನೆಲಸಮವಾಗಿದೆ.

ಕಾಸರಗೋಡಿನ ಮುಳ್ಳೇರಿಯ ಹಾಗೂ ಬದಿಯಡ್ಕದಲ್ಲಿ ಸೋಮವಾರ ಬೆಳಗ್ಗೆ ಸುರಿದ ಭಾರಿ ಗಾಳಿ ಸಹಿತ ಬಿರುಸಿನ ಮಳೆಗೆ ವ್ಯಾಪಕ ಹಾನಿಯಾಗಿದೆ. ಮೂಕಂಪಾರೆಯಲ್ಲಿ ಹೆಂಚಿನ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿದೆ. ಕೊಳ್ನಾಡಿನಲ್ಲಿ ಕೋಳಿಫಾರಂ ನೆಲಸಮಗೊಂಡಿದೆ.

ಚಿಕ್ಕಮಗಳೂರಿನ ವಿವಿಧೆಡೆ ಸೋಮವಾರ ನಸುಕಿನಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕಡೂರು ತಾಲ್ಲೂಕಿನ ಮಚ್ಚೇರಿ, ಯಳಗೊಂಡನಹಳ್ಳಿ, ಎಂ.ಕೋಡಿಹಳ್ಳಿಯಲ್ಲಿ ಕೆಲ ಮನೆಗಳ ಹೆಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಂ.ಕೋಡಿಹಳ್ಳಿಯ ಪ್ರಾಥಮಿಕ ಶಾಲೆಯ ಚಾವಣಿಯ ಶೀಟುಗಳು ಬಿದ್ದಿವೆ.

ಗಾಳಿ, ಮಿಂಚು, ಗುಡುಗಿನ ಆರ್ಭಟ ಜೋರಾಗಿತ್ತು. ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ಭಾಗದಲ್ಲಿ ಮಳೆಯಾಗಿದೆ. ರೋಹಿಣಿ ಮಳೆ ಅಬ್ಬರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬಿರುಗಾಳಿ ಸಹಿತ ಮಳೆ: ವಿಜಯಪುರ ನಗರ ಹಾಗೂ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಹಾಗೂ ಸೋಮ
ವಾರ ನಸುಕಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪ ಕಡಿಮೆಯಾಗಿದೆ.

ಸಿಡಿಲಿಗೆ ಐವರು, ವಿದ್ಯುತ್ ತಗುಲಿ ಇಬ್ಬರು ಸಾವು

ಕಲಬುರ್ಗಿ: ಕಲಬುರ್ಗಿ, ರಾಯಚೂರು ಜಿಲ್ಲೆಯಲ್ಲಿ ಮಳೆ ಸಂಬಂಧಿ ಅವಘಡದಲ್ಲಿ ಒಟ್ಟು ಏಳು ಜನ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಒಂದು ಎತ್ತು, 14 ಮೇಕೆ, 10 ಕುರಿ ಸಾವನ್ನಪ್ಪಿವೆ.

ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಮಾಡಬೂಳ ತಾಂಡಾದಲ್ಲಿ ಸಿಡಿಲು ಬಡಿದು ಗೇಮು ಶಂಕ್ರು ರಾಠೋಡ (32), ಸುರೇಶ ಮಾನಸಿಂಗ್ ಪವಾರ (30) ಮತ್ತು ಬೋಂದಿಗೇರಿ ತಾಂಡಾದ ಯುವರಾಜ ಖೇಮು ಚವ್ಹಾಣ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿತಾರಾ ಜಗನ್ನಾಥ ಪವಾರ (35) ಗಾಯಗೊಂಡಿದ್ದಾರೆ. ಮಳೆ ಬರುವಾಗ ಎಲ್ಲರೂ ಮಾಡಬೂಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಗುಡಿ ಪಕ್ಕದಲ್ಲಿರುವ ಮರದಡಿ ಆಸರೆ ಪಡೆದಿದ್ದರು.

ಆಳಂದದಲ್ಲಿ ಮನೆ ಮೇಲಿನ ಬೆಳಕಿಂಡಿ ಮುಚ್ಚಲು ಹೋಗಿದ್ದ ಅಬ್ದುಲ್‌ಗನಿ ಲಾಡ್ಲೇಸಾಬ್‌ ಮಾಸಲ್ದಾರ್‌ (14) ಹಾಗೂ ಹೊಲದಿಂದ ಮನೆಗೆ ಮರಳುತ್ತಿದ್ದ ಸುರೇಶ ದಿಗಂಬರ ಶೇರಖಾನೆ (17) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದಲ್ಲಿ ಭಾನುವಾರ ರಾತ್ರಿ ಗಾಳಿ, ಮಳೆಯಿಂದ ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್‌ ಪ್ರವಹಿಸಿ ಹಸೇನ್‌ಬಾಷಾ (36) ಮತ್ತು ಹುಸೇನ್‌ಬಾಷಾ (34) ಸಹೋದರರು
ಸಾವನ್ನಪ್ಪಿದ್ದಾರೆ.

ಸಿಡಿಲು ಬಡಿದು ಕಾಳಗಿ ತಾಲ್ಲೂಕಿನ ಬುಗಡಿ ತಾಂಡಾದಲ್ಲಿ ರೈತ ರಾಮು ಚಾಮು ಚವ್ಹಾಣ ಅವರ ಎತ್ತು, ಚಿಂಚೋಳಿ ತಾಲ್ಲೂಕಿನ ಕುಡಳ್ಳಿಯಲ್ಲಿ ಶರಣಪ್ಪ ಕಟ್ಟಿಮನಿ ಹಾಗೂ ಅಶೋಕ ಗುತ್ತೇದಾರ ಅವರಿಗೆ ಸೇರಿದ 14 ಮೇಕೆಗಳು, ಕೊಪ್ಪಳ ಜಿಲ್ಲೆ ಅಡವಿಭಾವಿ ಗ್ರಾಮದ ಹೊರವಲಯದ ಕುರಿದೊಡ್ಡಿಯಲ್ಲಿ ಹತ್ತು ಕುರಿಗಳು ಸಾವನ್ನಪ್ಪಿವೆ.

ಸಿಡಿಲಿಗೆ ನಾಲ್ಕು ಜಾನುವಾರು ಬಲಿ( ಗೌರಿಬಿದನೂರು): ಭಾನುವಾರ ರಾತ್ರಿ ಸಿಡಿಲಿನ ಆರ್ಭಟಕ್ಕೆ ತಾಲ್ಲೂಕಿನ ಇಡಗೂರು, ಜಾಲಹಳ್ಳಿ ಹಾಗೂ ಹೊಸಕೋಟೆಯಲ್ಲಿ ನಾಲ್ಕು ಜಾನುವಾರುಗಳು ಬಲಿಯಾಗಿವೆ. ವೇದಲವೇಣಿ ಗ್ರಾಮದ ಜಯಮ್ಮ ಅವರ ಫಾರಂನಲ್ಲಿ ಸಾಕಿದ್ದ 3 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ತಿಪ್ಪಗಾನಹಳ್ಳಿ ಬಳಿಯ ಟೋಲ್ ಚಾವಣಿ ನೆಲಕ್ಕುರುಳಿದೆ.

ಚೆಕ್‌ಡ್ಯಾಂ ಭರ್ತಿ

ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನವರೆಗೂ ಸುರಿದ ಮಳೆಗೆ ಹಲವು ಚೆಕ್‌ಡ್ಯಾಂಗಳು ತುಂಬಿದ್ದು, ಕೆರೆ–ಕಟ್ಟೆಗಳಿಗೆ ನೀರು ಹರಿದುಬಂದಿದೆ. ಹೊಳಲ್ಕೆರೆ ತಾಲ್ಲೂಕಿನ ಕೊಂಡಾಪುರ, ಗೌರಿಪುರಗಳಲ್ಲಿ ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಹನುಮನಕಟ್ಟೆ, ಕೇಶವಾಪುರ ಕೆರೆಗಳಲ್ಲಿ ನೀರು ನಿಂತಿದೆ. ಹಿರಿಯೂರು ತಾಲ್ಲೂಕಿನ ಐಮಂಗಲ ಸುತ್ತ ಉತ್ತಮ ಮಳೆ ಬಿದ್ದಿದೆ. ಮಲ್ಲಪ್ಪನಹಳ್ಳಿಯ ಚೆಕ್‌ಡ್ಯಾಂಗಳು ಭರ್ತಿಯಾಗಿ ನೀರು ಹರಿದಿದೆ.

ಸಂಪರ್ಕ ಕಡಿತ

ದೊಡ್ಡಬಳ್ಳಾಪುರ: ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಮೋರಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಈ ಗ್ರಾಮಕ್ಕೆ ಇರುವುದೇ ಒಂದು ರಸ್ತೆ. ಗ್ರಾಮಕ್ಕೆ ಸಂಪರ್ಕವೇ ಸಂಪೂರ್ಣವಾಗಿ ಕಡಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.