ಪತ್ರಿಕಾಗೋಷ್ಠಿಯಲ್ಲಿ, ಕೆ. ಗೋವಿಂದರಾಜು, ಜಿ. ಪರಮೇಶ್ವರ, ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಯಾರ ಬಳಿಯೂ ನಾನು ಮಾತನಾಡಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಾಲ್ತುಳಿತ ಘಟನೆ ನಡೆದ ಬೆನ್ನಲ್ಲೇ ಖಾತೆ ಬದಲಾವಣೆಗೆ ನಾನು ಪಟ್ಟು ಹಿಡಿದಿದ್ದೇನೆಂಬ ವದಂತಿ ಹರಡಿದೆ. ನಾನು ಖಾತೆ ಬದಲಾವಣೆಗೆ ಕೇಳಿದ್ದೇನೆಂದು ಯಾರು ಹೇಳಿದ್ದಾರೆ? ಯಾವ ಮೂಲಗಳ ಆಧಾರದಲ್ಲಿ ಸುದ್ದಿಯಾಗಿದೆ. ನನ್ನನ್ನು ನೇರವಾಗಿ ಕೇಳಬೇಕಿತ್ತಲ್ಲವೇ’ ಎಂದು ಹೇಳುತ್ತಲೇ ಗರಂ ಆದರು.
‘ಯಾರು ಏನೇ ಹೇಳಲಿ. ನೀವು ನನ್ನ ಬಳಿ ನೇರವಾಗಿ ಬಂದು ಕೇಳಿ. ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ. ಈ ರೀತಿ ಒಬ್ಬರ ವ್ಯಕ್ತಿತ್ವವನ್ನು ಕೊಲೆ ಮಾಡಬಾರದು. ಇದು ಸರಿ ಎನಿಸುವುದಿಲ್ಲ. ಯಾರಿಗೂ ಶೋಭೆ ತರುವುದಿಲ್ಲ’ ಎಂದರು.
ಕಾಲ್ತುಳಿತ ಘಟನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ಇಂತಹ ಘಟನೆ ಆಗಬಾರದಿತ್ತು. ಇದಕ್ಕೆ ಎಲ್ಲರೂ ನೋವು ಅನುಭವಿಸುತ್ತಿದ್ದೇವೆ. ಈ ಪ್ರಕರಣ ನಮಗೆ ಸವಾಲು. ಇಂತಹ ಸಂದರ್ಭದಲ್ಲಿ ನಾವು ಖಾತೆ ಬದಲಾವಣೆಗೆ ಕೇಳುವುದು ಸರಿಯಲ್ಲ. ಈ ಸಂದರ್ಭವನ್ನು ನಾವು ಗಟ್ಟಿಯಾಗಿ ಎದುರಿಸಬೇಕು’ ಎಂದೂ ಹೇಳಿದರು.
‘ಪೊಲೀಸರ ಸಲಹೆಯನ್ನು ಮೀರಿ ಆರ್‌ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತೇ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾನು ಏನೇ ಹೇಳಿದರೂ ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಈಗಲೇ ನಾನು ಏನನ್ನೂ ಹೇಳುವುದಿಲ್ಲ’ ಎಂದರು.
‘ಕಾಲ್ತುಳಿತ ಪ್ರಕರಣದ ಕುರಿತು ರಾಹುಲ್ ಗಾಂಧಿ ಜೊತೆ ನಾನು ಮಾತನಾಡಿದ್ದೇನೆ ಎಂಬ ವಿಚಾರವೂ ಸತ್ಯಕ್ಕೆ ದೂರವಾದುದು. ಘಟನೆಯ ಬಗ್ಗೆ ಹೈಕಮಾಂಡ್‌ಗೆ ದೂರವಾಣಿ ಮೂಲಕ ಮಾಹಿತಿ ಕೊಟ್ಟಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.