ADVERTISEMENT

ಐಎಎಸ್ ಅಧಿಕಾರಿ ವಿಜಯ್‌ಶಂಕರ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 16:06 IST
Last Updated 23 ಜೂನ್ 2020, 16:06 IST
ಬಿ.ಎಂ. ವಿಜಯಶಂಕರ್‌
ಬಿ.ಎಂ. ವಿಜಯಶಂಕರ್‌   

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಬಿ.ಎಂ. ವಿಜಯ್‌ಶಂಕರ್ (59) ಅವರು ತಮ್ಮ ಮನೆಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ ವಿಜಯ್‌ಶಂಕರ್ ಅವರುಪತ್ನಿಹಾಗೂ ಇಬ್ಬರು ಪುತ್ರಿಯರ ಜೊತೆ ವಾಸವಿದ್ದರು. ಮನೆಯ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಮಂಗಳವಾರ ರಾತ್ರಿ ಭೇಟಿ ನೀಡಿದರು.

ಉದ್ಯಮಿ ಮನ್ಸೂರ್‌ ಖಾನ್ ಒಡೆತನದ ‘ಐಎಂಎ’ ಕಂಪನಿ ವಂಚನೆ ಪ್ರಕರಣದಲ್ಲಿ ಲಂಚ ಪಡೆದ ಆರೋಪದಡಿ ಸಿಬಿಐ ಅಧಿಕಾರಿಗಳು, ವಿಜಯ್‌ಶಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಇದೇ ಪ್ರಕರಣದಲ್ಲಿ ವಿಜಯ್‌ಶಂಕರ್ ಅವರನ್ನು ಅಮಾನತು ಮಾಡಲಾಗಿತ್ತು. ಅಂದಿನಿಂದ ಅವರು ಮನೆಯಲ್ಲೇ ಇದ್ದರು.

ADVERTISEMENT

‘ಆತ್ಮಹತ್ಯೆ ಮಾಹಿತಿ ಗೊತ್ತಾಗುತ್ತಿದ್ದಂತೆ ಮನೆಗೆ ಬಂದಿದ್ದೇವೆ. ಸದ್ಯಕ್ಕೆ ಕಾರಣ ಗೊತ್ತಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮೈಕೊ ಲೇಔಟ್ ಇನ್‌ಸ್ಪೆಕ್ಟರ್‌ ಭೇಟಿ; ಆರೋಪಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದರಿಂದ ತಿಲಕ್‌ನಗರ ಠಾಣೆ ಪೊಲೀಸರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಠಾಣೆಯನ್ನೇ ಸೀಲ್‌ಡೌನ್ ಮಾಡಲಾಗಿದೆ. ಠಾಣೆ ಉಸ್ತುವಾರಿ ವಹಿಸಿಕೊಂಡಿರುವ ಮೈಕೊ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.