ADVERTISEMENT

ತಜ್ಞರು ಹೇಳಿದರೆ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚಲು ಸಿದ್ಧ: ಬಿ.ಸಿ. ನಾಗೇಶ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 16:06 IST
Last Updated 15 ನವೆಂಬರ್ 2022, 16:06 IST
ಬಿ.ಸಿ. ನಾಗೇಶ್‌
ಬಿ.ಸಿ. ನಾಗೇಶ್‌    

ಬೆಂಗಳೂರು: ಶಾಲಾ ಕೊಠಡಿಗಳಿಗೆ ನಿರ್ದಿಷ್ಟ ಬಣ್ಣ ಬಳಿಯುವಂತೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಆದರೆ, ವಿದ್ಯಾರ್ಜನೆಗೆ ಕೇಸರಿ ಬಣ್ಣ ಪೂರಕ ಎಂಬುದಾಗಿ ತಜ್ಞರು ಶಿಫಾರಸು ಮಾಡಿದರೆ ಅದೇ ಬಣ್ಣ ಬಳಿಯಲು ಸರ್ಕಾರ ಸಿದ್ಧ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಜ್ಞಾನ ಸಂಪಾದನೆಗೆ ವಿವೇಕಾನಂದರನ್ನು ಮಾದರಿಯನ್ನಾಗಿ ಇರಿಸಿಕೊಳ್ಳಬೇಕಿದೆ. ಆ ಕಾರಣಕ್ಕಾಗಿ ‘ವಿವೇಕ’ ಎಂಬ ಹೆಸರಿನಡಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಚ್ಚುವರಿಯಾಗಿ 900 ಕೊಠಡಿ ಮಂಜೂರು ಮಾಡಲಾಗುವುದು’ ಎಂದರು.

ಶಾಲಾ ಕೊಠಡಿಗಳ ವಿನ್ಯಾಸ, ಬಣ್ಣ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಇಲಾಖಾ ಹಂತದಲ್ಲಿ ಯಾವುದೇ ನಿರ್ಧಾರವೂ ಆಗಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧದ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿತ್ತು. ಈಗಲೂ ಶಾಲಾ ಕೊಠಡಿಯ ಬಣ್ಣದ ವಿಚಾರದಲ್ಲೂ ಅದೇ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ADVERTISEMENT

‘ವಿರೋಧ ಮಾಡುವುದಕ್ಕಾಗಿಯೇ ಕೆಲವರು ಇರುತ್ತಾರೆ. ಕೇಸರಿ ಬಣ್ಣವನ್ನು ಕಾಂಗ್ರೆಸ್‌ನವರು ಏಕೆ ವಿರೋಧ ಮಾಡುತ್ತಾರೆ? ಕೇಸರಿ ಬಣ್ಣದಲ್ಲಿ ಹಿಂದುತ್ವ ಕಾಣಿಸಿತೆ?’ ಎಂದು ನಾಗೇಶ್‌ ಪ್ರಶ್ನಿಸಿದರು.

ಎಲ್ಲ ಶಾಲೆಗಳಲ್ಲೂ ವಿವೇಕಾನಂದರ ಭಾವಚಿತ್ರ ಇರಿಸಲಾಗುವುದು. ಯಾವ ಮಾದರಿಯ ಭಾವಚಿತ್ರ ಎಂಬುದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.