ADVERTISEMENT

ಕೆಲಸ ಮಾಡದಿದ್ದರೆ ಬದಲಿಸುವುದು ಅನಿವಾರ್ಯ: AAGಗಳಿಗೆ ಸಿ.ಎಂ ಎಚ್ಚರಿಕೆ

ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಸಿ.ಎಂ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:33 IST
Last Updated 26 ಜೂನ್ 2025, 16:33 IST
ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ ಪಾಲ್ಗೊಂಡಿದ್ದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ ಪಾಲ್ಗೊಂಡಿದ್ದರು.   

ಬೆಂಗಳೂರು: ‘ನಿಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ. ತಪ್ಪಿದಲ್ಲಿ ನಿಮ್ಮನ್ನು ಬದಲಾಯಿಸುವುದು ಅನಿವಾರ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಎಚ್ಚರಿಕೆ ನೀಡಿದರು.

ವಿಧಾನಸೌಧದಲ್ಲಿ ಗುರುವಾರ ನಡೆದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರದ ಪರ ಸಮರ್ಪಕವಾಗಿ ವಾದ ಮಾಡಲು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದರು.

‘ನೀವೆಲ್ಲರೂ ಹಿರಿಯ ಅಡ್ವೊಕೇಟ್‌ಗಳು. ಸರ್ಕಾರದ ಆದ್ಯತೆಗಳನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ. ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಸರ್ಕಾರ ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾಗಿರುವ ಪ್ರಕರಣಗಳಲ್ಲೂ ಸರ್ಕಾರದ ಪರವಾಗಿ ಆದೇಶಗಳು ಬರುತ್ತಿಲ್ಲ. ಇದಕ್ಕೆ ಕಾರಣವೇನು’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಸುಲಭವಾಗಿ ತಡೆಯಾಜ್ಞೆ ಸಿಗುತ್ತಿದೆ. ಇದಕ್ಕೆ ಕಾರಣವೇನು? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸುತ್ತಿಲ್ಲ. ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಸಿದ್ದರಾಮಯ್ಯ ತಾಕೀತು ಮಾಡಿದರು.

‘ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲೂ ಸರ್ಕಾರಕ್ಕೆ ಮುಜುಗರವಾಗುವ ಬೆಳವಣಿಗೆಗಳು ಆಗಿವೆ. ನಿಮ್ಮ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ಬರಬಾರದು’ ಎಂದು ಹೇಳಿದರು.

‘ನ್ಯಾಯಾಲಯದ ಕಲಾಪಗಳಿಗೆ ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸಬೇಕು. ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ನೀಡಬಾರದು. ಪ್ರತಿಯೊಂದು ಪ್ರಕರಣಗಳನ್ನು ಸವಾಲಿನಿಂದ ಸ್ವೀಕರಿಸಿ, ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೂ ಉತ್ತಮ ಹೆಸರು ಬರುತ್ತದೆ. ನೀವು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು’ ಎಂದು ಸಿದ್ದರಾಮಯ್ಯ ಸೂಚಿಸಿದರು.

‘ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರ ನಿಗದಿಪಡಿಸಬೇಕು. ಒಂದು ವೇಳೆ ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತರಬೇಕು. ಸರ್ಕಾರದ ಪರವಾಗಿ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರದ 21,799 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಇವೆ. ಇದರಲ್ಲಿ 5016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ, ಅಡ್ವೊಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.