ಸಿಂದಗಿ: ‘ಬಿಜೆಪಿಯವರಿಗೆ ಸಂವಿಧಾನದ ಪರಿಕಲ್ಪನೆ ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿರುವುದು ಖಂಡನೀಯ’ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಿಮಗೆ ನಿಜವಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ಗೌರವ, ಸ್ವಾಭಿಮಾನ ಇದ್ದರೆ ಒಂದು ನಿಮಿಷವೂ ಕಾಂಗ್ರೆಸ್ ಪಕ್ಷದಲ್ಲಿ ಇರಬಾರದು. ಡಾ.ಅಂಬೇಡ್ಕರ್ ಗೆ ಕಾಂಗ್ರೆಸ್ ಪಕ್ಷ ಕೊಟ್ಟ ಹಿಂಸೆ ಯಾವತ್ತೂ ಮರೆಯಲಾಗದು. ಅವರನ್ನು ಚುನಾವಣೆಯಲ್ಲಿ ಸೋಲಿಸಿರುವುದು ಕಾಂಗ್ರೆಸ್ ಪಕ್ಷ. ಅವರು ತೀರಿ ಹೋದ ಸಂದರ್ಭದಲ್ಲಿ ಅಂತ್ಯಕ್ರಿಯೆಗಾಗಿ ಸ್ಥಳ ನೀಡದ ಪಕ್ಷ ಕಾಂಗ್ರೆಸ್ ಎಂಬುದನ್ನು ಪ್ರತಿಯೊಬ್ಬ ಪರಿಶಿಷ್ಟ ಜಾತಿಯ ಜನರು ಮರೆಯಬಾರದು. ಪರಿಶಿಷ್ಟ ಜಾತಿಯ ಜನರು ಕಾಂಗ್ರೆಸ್ ಪಕ್ಷಕ್ಕೆ ಯಾವತ್ತೂ ಮತ ನೀಡಬೇಡಿ’ ಎಂದು ಕೇಳಿಕೊಂಡರು.
‘ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರ್ ಬದುಕಿನ ಸ್ಥಳಗಳನ್ನು ಸ್ಮಾರಕಗಳನ್ನಾಗಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ₹350 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಬದುಕಿನ ಭೂಮಿಯನ್ನು ಸ್ಮಾರಕವನ್ನಾಗಿ ನಿರ್ಮಿಸಿದ್ದಾರೆ. ಮಹಾದೇವಪ್ಪನವರು ವಾಸ್ತವ ಅರಿತು ಮಾತನಾಡಬೇಕು’
ಎಂದು ಸಂಸದರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.