ADVERTISEMENT

PSI ನೇಮಕಾತಿ ಅಕ್ರಮ: ಬಂಧಿತ ಪಿಎಸ್‌ಐಗೆ ಕಾರೇ ಮನೆ

ಏಳು ಮೊಬೈಲ್‌, 20 ಸಿಮ್‌ ಕಾರ್ಡ್‌ ಬಳಸಿದ್ದ ನವೀನ್‌ ಪ್ರಸಾದ್!

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:30 IST
Last Updated 28 ಮಾರ್ಚ್ 2023, 19:30 IST
ನವೀನ್ ಪ್ರಸಾದ್‌
ನವೀನ್ ಪ್ರಸಾದ್‌   

ಬೆಂಗಳೂರು: ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಪಿಎಸ್‌ಐ ನವೀನ್‌ ಪ್ರಸಾದ್ ಎಂಬಾತನನ್ನು ಮಂಗಳವಾರ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು ಏಪ್ರಿಲ್‌ 6ರ ತನಕ ಸಿಐಡಿ ವಶಕ್ಕೆ ನೀಡಿದೆ.

ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ನವೀನ್‌ನನ್ನು ಬಂಧಿಸಲಾಗಿದೆ. ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈತ 43ನೇ ಆರೋಪಿಯಾಗಿದ್ದು, ಬಂಧಿತರ ಸಂಖ್ಯೆ 110ಕ್ಕೆ ಏರಿಕೆ ಆದಂತಾಗಿದೆ.

ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ನವೀನ್‌ ಅಕ್ರಮ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಸಿಐಡಿ ತಂಡಕ್ಕೆ ನವೀನ್‌ ಪಾತ್ರದ ಸುಳಿವು ಲಭಿಸಿದ ಬಳಿಕ ದಿಢೀರ್ ನಾಪತ್ತೆಯಾಗಿದ್ದ. ಆರಂಭದಲ್ಲಿ 10 ವರ್ಷ ಕಾನ್‌ಸ್ಟೆಬಲ್‌ ಆಗಿದ್ದ ನವೀನ್‌, ಪಿಎಸ್ಐ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಎಂದು ಮೂಲಗಳು ಹೇಳಿವೆ.

ADVERTISEMENT

ಸಿಮ್‌ ಬದಲಾವಣೆ: ಪದೇ ಪದೇ ಸಿಮ್‌ ಬದಲಾವಣೆ ಮಾಡುತ್ತಿದ್ದ ಆರೋಪಿಯು ಏಳು ಮೊಬೈಲ್‌ ಬಳಸುತ್ತಿದ್ದ. 20ಕ್ಕೂ ಹೆಚ್ಚು ನಂಬರ್‌ ಬದಲಾಯಿಸಿದ್ದ. ಬಂಧನದ ಭೀತಿಯಿಂದ ತೆಲಂಗಾಣದ ನೋಂದಣಿಯ (ಟಿಎಸ್‌ 09 ಎಫ್‌ಎಚ್‌ 3777) ಕಾರನ್ನೇ ಮನೆ ಮಾಡಿಕೊಂಡಿದ್ದ. ಕಾರಿನಲ್ಲಿ ಬಟ್ಟೆ ಬದಲಾಯಿಸುತ್ತಿದ್ದ. ಹಲವು ರಾತ್ರಿಗಳನ್ನು ಕಾರಿನಲ್ಲೇ ಕಳೆದಿದ್ದ.

ಸೋಮವಾರ ರಾತ್ರಿ ನಂದಿನಿ ಲೇಔಟ್‌ನ ರಿಂಗ್‌ ರಸ್ತೆಯಲ್ಲಿ ಕಾರಿನಲ್ಲಿ ಸುತ್ತಾಟ ನಡೆಸುತ್ತಿದ್ದ ಮಾಹಿತಿ ತಿಳಿದಿದ್ದ ಸಿಐಡಿ ಡಿವೈಎಸ್ಪಿ ಅಂಜುಮಾಲಾ ಟಿ.‌ನಾಯಕ್, ಪತ್ತೆದಳದ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಅಭಿಜಿತ್ ಆದಿತ್ಯ ಹಾಗೂ ಶ್ರೀಕಾಂತ್ ನೇತೃತ್ವದ ತಂಡವು ಆರೋಪಿಯನ್ನು ಕಂಠೀರವ ಸ್ಟುಡಿ‌ಯೊ ಬಳಿ ಬಂಧಿಸಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಪಾರ್ಟ್‌ಮೆಂಟ್‌ವೊಂದಕ್ಕೆ ರಾತ್ರಿ ವೇಳೆ ಬಂದುಹೋಗುತ್ತಿದ್ದ ಆರೋಪಿ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ತನ್ನ ಗುರುತು ಪತ್ತೆಯಾಗದಂತೆ ಸದಾ ಕ್ಯಾಪ್‌ ಧರಿಸುತ್ತಿದ್ದ. ಸಬ್‌ ಇನ್‌ಸ್ಪೆಕ್ಟರ್‌ಗಳಾದ ಅಭಿಜಿತ್ ಆದಿತ್ಯ ನೇತೃತ್ವದ ತಂಡವು ಫೆ. 3ರಂದು ಮಂತ್ರಾಲಯದಲ್ಲಿ ಈತ ಇರುವುದನ್ನು ಪತ್ತೆ ಮಾಡಿತ್ತು. ಅದಾದ ಮರುದಿನ ಬೆಂಗಳೂರು ಹೊಸಗೊಲ್ಲರಪಾಳ್ಯದ ಬಳಿ ಇರುವುದನ್ನು ಪತ್ತೆ ಮಾಡಿದ್ದ ತನಿಖಾ ತಂಡ, ಅಲ್ಲಿಗೆ ತೆರಳಿದಾಗ ಪರಾರಿಯಾಗಿದ್ದ ಎಂದು ಮೂಲಗಳು ಹೇಳಿವೆ.

‘ಮಾಗಡಿ ಮೂಲದ ನವೀನ್‌, ಮುಂಬೈನಲ್ಲಿ ಬಂಧಿತ ಇನ್‌ಸ್ಪೆಕ್ಟರ್‌ ‍ಷರೀಫ್‌ ಕಳ್ಳಿಮನಿ ಹಾಗೂ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಹರೀಶ್‌ ಜತೆಗೆ ಸಂಪರ್ಕದಲ್ಲಿದ್ದ. ಮೂವರೂ ಸೇರಿಕೊಂಡು ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು. ಕೆಲಸದ ಆಮಿಷವೊಡ್ಡಿ ಅಭ್ಯರ್ಥಿ ರಘುವೀರ್‌ನಿಂದ ₹ 85 ಲಕ್ಷ ಹಾಗೂ ದಿಲೀಪ್‌ನಿಂದ ₹ 45 ಲಕ್ಷ ಪಡೆದುಕೊಂಡಿದ್ದರು. ಷರೀಫ್‌ ಕಳ್ಳಿಮನಿ ಹಾಗೂ ನವೀನ್‌ ತಲಾ ₹ 65 ಲಕ್ಷ ಹಂಚಿಕೊಂಡಿದ್ದರು’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಗೆಳತಿಯೊಂದಿಗೆ ಸುತ್ತಾಟ: ‘ಪ್ರಕರಣದಲ್ಲಿ ನವೀನ್‌ ಹೆಸರು ಕೇಳಿಬಂದಂತೆ ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಳಿಕ ಪತ್ನಿಯನ್ನು ತವರಿಗೆ ಕಳುಹಿಸಿ ತಲೆಮರೆಸಿಕೊಂಡಿದ್ದ ನವೀನ್‌, ಗೆಳತಿಯ ಜತೆಗೆ ಕಾರಿನಲ್ಲಿ ಸುತ್ತಾಟ ನಡೆಸುತ್ತಿದ್ದ. ಮೊಬೈಲ್‌ ನಂಬರ್‌ ಸಂಖ್ಯೆಯ ಲೊಕೇಶನ್‌ ಆಧರಿಸಿ ಹಾಸನ ಜಿಲ್ಲೆಯ ಬೇಲೂರಿಗೆ ತೆರಳಿದ್ದ ತಂಡಕ್ಕೆ ನವೀನ್‌ ಗೆಳತಿ ಅರಸೀಕೆರೆಯ ಅಶ್ವಿನಿ ಮಾತ್ರ ಸಿಕ್ಕಿದ್ದರು. ನವೀನ್ ಬಗ್ಗೆ ವಿಚಾರಿಸಿದರೂ ಆಕೆ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಅಶ್ವಿನಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಲಾಗುವುದು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.