ADVERTISEMENT

ಶುಚಿ ಯೋಜನೆಯ 3 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಅಕ್ರಮ ದಾಸ್ತಾನು

ಶುಚಿ ಯೋಜನೆಯಡಿ ಪೂರೈಕೆ: ಎರಡು ವರ್ಷಗಳಿಂದ ಅಕ್ರಮ ದಾಸ್ತಾನು

ವೆಂಕಟೇಶ್ ಜಿ.ಎಚ್
Published 21 ಜೂನ್ 2020, 19:30 IST
Last Updated 21 ಜೂನ್ 2020, 19:30 IST
ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)
ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)   

ಬಾಗಲಕೋಟೆ: ‘ಶುಚಿ’ ಯೋಜನೆಯಡಿ ಶಾಲಾ ಮಕ್ಕಳು ಹಾಗೂ ಮಹಿಳೆಯರಿಗೆ ವಿತರಿಸಲು ಸರ್ಕಾರ ಪೂರೈಸಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಫಲಾನುಭವಿಗಳಿಗೆ ವಿತರಿಸದೇ ಎರಡು ವರ್ಷಗಳಿಂದ ಉಗ್ರಾಣದಲ್ಲಿಯೇ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗಂಗೂಬಾಯಿ ಮಾನಕರ್, ಆರೋಗ್ಯ ಇಲಾಖೆ ಉಗ್ರಾಣದ ಮೇಲೆ ದಾಳಿ ನಡೆಸಿದಾಗ ಮೂರು ಲಕ್ಷಕ್ಕೂ ಹೆಚ್ಚು ನ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒಳಗೊಂಡ ಬಾಕ್ಸ್‌ಗಳು ಪತ್ತೆಯಾಗಿವೆ.

ಶುಚಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಅವರಿಗೆ ಸಿಇಒ ನೋಟಿಸ್ ಜಾರಿ ಮಾಡಿದ್ದಾರೆ.

ADVERTISEMENT

ಋತುಸ್ರಾವದ ಕಾಲದ ಸಮಯದಲ್ಲಿ ಶುಚಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಶುಚಿ ಯೋಜನೆಯಡಿಸ್ಯಾನಿಟರಿ ನ್ಯಾಪ್‌ಕಿನ್‌ ಪೂರೈಸಲಾಗುತ್ತದೆ.ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣುಮಕ್ಕಳಿಗೂ ಕೊಡಲಾಗುತ್ತದೆ.

‘ಇದರ ಉಸ್ತುವಾರಿಗೆ ನನ್ನ (ಸಿಇಒ) ನೇತೃತ್ವದಲ್ಲಿಯೇ ಜಿಲ್ಲಾ ಮಟ್ಟದ ಸಮಿತಿ ಇದೆ. ನ್ಯಾಪ್‌ಕಿನ್‌ಗಳು ಪೂರೈಕೆಯಾಗದ ವಿಚಾರ ಸಮಿತಿಯ ಗಮನಕ್ಕೂ ತಂದಿಲ್ಲ‘ ಎಂದು ಸಿಇಒ ಗಂಗೂಬಾಯಿ ಮಾನಕರ್ ’ಪ್ರಜಾವಾಣಿ’ಗೆ ತಿಳಿಸಿದರು.

ಬೇಕಾಬಿಟ್ಟಿ ಸಂಗ್ರಹ:ಹೀಗೆ ಪೂರೈಸಲಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಫಲಾನುಭವಿಗಳ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿ ಸಂಗ್ರಹಿಸಿಡಬೇಕಿದೆ. ಆದರೆ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ನೆಲದ ಮೇಲೆ ಬೇಕಾಬಿಟ್ಟಿ ಎಸೆದಿರುವುದು ಕಂಡುಬಂದಿದೆ. ಗ್ರಾಮೀಣ ಹೆಣ್ಣು ಮಕ್ಕಳಿಗೆ ಪೂರೈಸಲಾದ ಸ್ಯಾನಿಟರಿ ನ್ಯಾ‍‍ಪ್‌ಕಿನ್‌ಗಳನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಸಂಗ್ರಹಿಸಿಟ್ಟಿರುವುದು ಗೊತ್ತಾಗಿದೆ. ಅದನ್ನು ಪರಿಶೀಲಿಸಲಿದ್ದೇವೆ ಎಂದು ಗಂಗೂಬಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.