ADVERTISEMENT

ಅಬ್ಬಾಸ್‌ ಬಳಿ ₹ 9 ಕೋಟಿ ಇಟ್ಟಿರುವ ಖಾನ್‌

ಹೊನಕೆರೆ ನಂಜುಂಡೇಗೌಡ
Published 22 ಆಗಸ್ಟ್ 2019, 20:01 IST
Last Updated 22 ಆಗಸ್ಟ್ 2019, 20:01 IST
   

ಬೆಂಗಳೂರು: ಐಎಂಎ ಸಮೂಹ ಕಂಪನಿಗಳ ಮಾಲೀಕ ಮನ್ಸೂರ್‌ ಖಾನ್‌ ದುಬೈಗೆ ಪರಾರಿಯಾಗುವ ಮುನ್ನ 38 ಕೆ.ಜಿ ಚಿನ್ನ ಕರಗಿಸಿ ಮಾರಾಟ ಮಾಡಿದ್ದು, ಇದರಿಂದ ಬಂದ ಹಣದಲ್ಲಿ ₹ 9 ಕೋಟಿಯನ್ನು ತನ್ನ ಮಿತ್ರ ಅಬ್ಬಾಸ್‌ ಎಂಬುವರ ಬಳಿ ಇಟ್ಟಿದ್ದಾರೆ ಎನ್ನಲಾಗಿದೆ.

ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ಮುಂದೆ ಮನ್ಸೂರ್‌ ಖಾನ್‌ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶ ನಾಲಯ ಮತ್ತು ಎಸ್‌ಐಟಿ ಅಧಿಕಾರಿಗಳು ದುಬೈಯಲ್ಲಿರುವ ಅಬ್ಬಾಸ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಈಚಿನ ರಾಜ್ಯ ಸರ್ಕಾರದ ಆದೇಶದಿಂದಾಗಿ ಪ್ರಕರಣ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರವಾಗಲಿದ್ದು, ಅಬ್ಬಾಸ್‌ನನ್ನು ಕೇಂದ್ರ ಸಂಸ್ಥೆ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಕಳೆದ ಒಂದು ವರ್ಷದಲ್ಲಿ ಖಾನ್‌ (ಆಭರಣ ಮಳಿಗೆ ಬಂದ್‌ ಆಗುವವರೆಗೆ) ಒಂದೂವರೆ ಟನ್‌ ಚಿನ್ನ ಕರಗಿಸಿ, ಮಾರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

‘ಚಿನ್ನ ಮಾರಾಟದಿಂದ ಬಂದಿರುವ ಹಣವನ್ನು ಆರೋಪಿ ಹೊರ ದೇಶದಲ್ಲಿ ಹೂಡಿಕೆ ಮಾಡಿರಬಹುದೆ?‘ ಎಂಬ ಅನುಮಾನದಿಂದ ವಿಚಾರಣೆ ನಡೆಸಿದಾಗ ₹ 9 ಕೋಟಿ ಇಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ತನಿಖಾಧಿಕಾರಿಗಳಿಗೆಸಿಕ್ಕಿರುವ ಮಹತ್ವದ ದಾಖಲೆಗಳಲ್ಲಿ ಚಿನ್ನ ವಹಿವಾಟಿಗೆ ಸಂಬಂಧಿಸಿದ ಮಾಹಿತಿಗಳಿವೆ.

‘ಈ ಹಣದಲ್ಲಿ ಸ್ವಲ್ಪ ಭಾಗವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗಿದೆ. ಕೊಂಚ ಭಾಗವನ್ನು ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿಗೆ ಲಂಚವಾಗಿ ನೀಡಲಾಗಿದೆ’ ಎಂದು ಖಾನ್‌ ತಿಳಿಸಿದ್ದಾರೆ.

2017ರ ಜುಲೈ 20ರಂದು ಸೇರಿದ್ದ ರಾಜ್ಯ ಮಟ್ಟದ ಸಮನ್ವಯ ಸಮಿತಿಯಲ್ಲಿ (ಎಸ್‌ಎಲ್‌ಸಿಸಿ) ಈ ವಿಷಯ ಚರ್ಚೆಯಾಗಿತ್ತು.

ಪೊಲೀಸ್‌ ಇಲಾಖೆಯಲ್ಲಿ ಅಪಸ್ವರ!

ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರದ ತೀರ್ಮಾನ ಕುರಿತು ಪೊಲೀಸ್‌ ಇಲಾಖೆಯಲ್ಲಿ ಪರ ಮತ್ತು ವಿರುದ್ಧದ ಚರ್ಚೆಗಳು ಆರಂಭವಾಗಿದೆ.

‘ಪ್ರಕರಣದ ತನಿಖೆ ನಡೆಸಲು ನಮ್ಮ ಪೊಲೀಸರೇ ಸಮರ್ಥರಿರುವಾಗ ಸಿಬಿಐಗೆ ಒಪ್ಪಿಸುವ ಅಗತ್ಯವಿರಲಿಲ್ಲ. ಮನ್ಸೂರ್‌ ಖಾನ್‌ ದುಬೈಗೆ ಪರಾರಿಯಾದ ಒಂದೂವರೆ ತಿಂಗಳೊಳಗೇ ಅವರ ಮನವೊಲಿಸಿ ಎಸ್‌ಐಟಿ ಅಧಿಕಾರಿಗಳು ವಾಪಸ್‌ ಕರೆತಂದಿದ್ದಾರೆ. ಈ ಕೆಲಸ ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ’ ಎಂದು ಕೆಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಖಾನ್‌ನಿಂದ ಅಕ್ರಮ ಲಾಭ ಪಡೆದ ಕೆಲವು ರಾಜಕಾರಣಿಗಳನ್ನು ಹಣಿಯಲು ಹಿಂದಿನ ಸರ್ಕಾರ ಎಸ್‌ಐಟಿ ಮೇಲೆ ಒತ್ತಡ ಹೇರಿತ್ತು. ಆದರೆ, ಈಗಿನ ಸರ್ಕಾರ ತನಿಖೆ ವಿಳಂಬ ಮಾಡುವಂತೆ ಸೂಚಿಸಿತ್ತು. ರಾಜಕೀಯ ಉದ್ದೇಶಕ್ಕಾಗಿ ಎಸ್‌ಐಟಿ ಬಳಸಿಕೊಳ್ಳಲಾಯಿತೇ ವಿನಾ, ಅಧಿಕಾರಿಗಳಿಗೆ ಮುಕ್ತವಾಗಿ ತನಿಖೆ ನಡೆಸಲು ಬಿಡಲಿಲ್ಲ’ ಎಂಬ ಟೀಕೆಗಳೂ ವ್ಯಕ್ತವಾಗಿವೆ.

‘ಇದೊಂದು ದೊಡ್ಡ ಹಗರಣ. ಅನೇಕ ಪ್ರಭಾವಿಗಳು ಕಂಪನಿ ಜತೆ ಶಾಮೀಲಾಗಿರುವುದರಿಂದ ಸಿಬಿಐ ತನಿಖೆ ನಡೆಸುವುದೇ ಸೂಕ್ತ. ನಮ್ಮ ಪೊಲೀಸರಿಗೆ ಕೆಲ ಇತಿಮಿತಿಗಳಿವೆ. ಹಿರಿಯ ಅಧಿಕಾರಿಗಳ ವಿಚಾರಣೆ ನಡೆಸುವುದು ಎಸ್‌ಐಟಿಗೆ ಕಷ್ಟ’ ಎಂದು ಅನೇಕರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.