ADVERTISEMENT

‘ಐಎಂಎ ಕಂಪನಿ ಮಾಲೀಕನ ಸುಳಿವು ಪತ್ತೆ’

ಮನ್ಸೂರ್‌ ಖಾನ್‌ ಅವರದ್ದು ಎನ್ನಲಾದ ವಿಡಿಯೊ ಬಿಡುಗಡೆ l ಎಡಿಜಿಪಿಗೆ ತನಿಖೆ ಪ್ರಗತಿ ತಿಳಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:53 IST
Last Updated 24 ಜೂನ್ 2019, 19:53 IST
ಮನ್ಸೂರ್ ಖಾನ್
ಮನ್ಸೂರ್ ಖಾನ್   

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿ ಪರಾರಿಯಾಗಿರುವ ‘ಐಎಂಎ ಸಮೂಹ ಕಂಪನಿ’ ಮಾಲೀಕ ಮನ್ಸೂರ್ ಖಾನ್ ಎಲ್ಲಿದ್ದಾರೆ ಎಂಬುದರ ಸುಳಿವು ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದೆ.

ಮನ್ಸೂರ್ ಖಾನ್‌ ಅವರದ್ದು ಎನ್ನಲಾದ 18 ನಿಮಿಷಗಳ ವಿಡಿಯೊವನ್ನು ‘ಐಎಂಎ ಗ್ರೂಪ್’ ಯೂಟ್ಯೂಬ್ ಚಾನೆಲ್‌ನಲ್ಲಿಭಾನುವಾರ ಅಪ್‌ಲೋಡ್‌ ಮಾಡಲಾಗಿದೆ. ‘ಐಎಂಎ ಮುಳುಗಲು ಹಲವು ಪ್ರಭಾವಿಗಳು ಕಾರಣರಾಗಿದ್ದು, ಅವರ ಹೆಸರು ಬಹಿರಂಗವಾದರೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಜೀವಂತವಾಗಿರಲು ಬಿಡುವುದಿಲ್ಲ’ ಎಂದು ವಿಡಿಯೊದಲ್ಲಿ ಮನ್ಸೂರ್ ಹೇಳಿದ್ದಾರೆ. ಆ ವಿಡಿಯೊ ಅಸಲಿತನದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಎಸ್‌ಐಟಿ ತಂಡದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ, ‘ಮನ್ಸೂರ್ ಖಾನ್ ಬಗ್ಗೆ ಸುಳಿವು ಸಿಕ್ಕಿದೆ. ತನಿಖೆ ದೃಷ್ಟಿಯಿಂದ ಆ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗದು’ ಎಂದರು.

ADVERTISEMENT

‘ಮನ್ಸೂರ್ ಖಾನ್, ವಿಡಿಯೊದಲ್ಲಿ ಕೆಲವರ ಹೆಸರು ಬಹಿರಂಗವಾಗಿದೆ. ಅಷ್ಟಕ್ಕೇ ಅವರೆಲ್ಲರಿಗೂ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ. ಪುರಾವೆಗಳು ಇದ್ದರೆ ನೋಟಿಸ್‌ ನೀಡಿ ಹೇಳಿಕೆ ಪಡೆಯುತ್ತೇವೆ’ ಎಂದು ಹೇಳಿದರು.

ಪ್ರಾಣ ಬೆದರಿಕೆ ಇದ್ದರೆ ರಕ್ಷಣೆ: ‘ಖಾನ್‌ ಮತ್ತು ಆತನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದರೆ ರಕ್ಷಣೆ ಕೊಡಲು ಸಿದ್ಧ. ಆದರೆ, ಕಾನೂನಿಗೆ ಗೌರವ ಕೊಟ್ಟು ಶರಣಾಗಿ, ತನಿಖೆಗೆ ಸಹಕರಿಸಬೇಕು’ ಎಂದು ರವಿಕಾಂತೇಗೌಡ ಹೇಳಿದರು.

‘ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಐಎಂಎ ಸಮೂಹ ಕಂಪನಿಗೆ ಸೇರಿದ್ದ ಆಸ್ತಿಗಳನ್ನು ಗುರುತಿಸಲಾಗಿದೆ. ಕಂಪನಿ ಒಡೆತನದ ಮಳಿಗೆಗಳ ಮೇಲೂ ದಾಳಿ ಮಾಡಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಜಪ್ತಿ ಮಾಡಲಾಗಿದೆ. ವಂಚನೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಕಂಪನಿಯ ನಿರ್ದೇಶಕರು ಯಾರು ಎಂಬುದನ್ನು ಪತ್ತೆ ಮಾಡಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಎಡಿಜಿಪಿಗೆ ತನಿಖೆ ಪ್ರಗತಿ ತಿಳಿಸಿದ ಅಧಿಕಾರಿಗಳು: ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಸಲೀಂ ಅಹ್ಮದ್ ಅವರನ್ನು ಸೋಮವಾರ ಭೇಟಿಯಾದ ಎಸ್‌ಐಟಿ ಅಧಿಕಾರಿಗಳು, ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

‘ಇದುವರೆಗೂ ನಡೆಸಿದ ತನಿಖೆಯ ವರದಿಯನ್ನು ಎಡಿಜಿಪಿಗೆ ತಿಳಿಸಲಾಗಿದೆ. ಖಾನ್‌ನದ್ದು ಎನ್ನಲಾದ ವಿಡಿಯೊ ಬಗ್ಗೆಯೂ ಹೆಚ್ಚು ಚರ್ಚೆ ನಡೆದಿದೆ. ವಿಡಿಯೊವನ್ನು ಯಾರು ಹಾಗೂ ಎಲ್ಲಿಂದ ಅಪ್‌ಲೋಡ್‌ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಎಡಿಜಿಪಿ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪಿಸ್ತೂಲ್, 41 ಕೆ.ಜಿ.ಚಿನ್ನ ಜಪ್ತಿ

‘ಐಎಂಎ ಸಮೂಹ ಕಂಪನಿ’ ಆಸ್ತಿಗಳನ್ನು ಗುರುತಿಸಿರುವ ಎಸ್‌ಐಟಿ ಅಧಿಕಾರಿಗಳು, ಒಂದೊಂದೇ ಆಸ್ತಿಗಳ ದಾಳಿ ಮಾಡುತ್ತಿದ್ದಾರೆ. ಸೋಮವಾರವೂ ‘ಐಎಂಎ ಗೋಲ್ಡ್‌ ಲೋನ್‌’ ಮಳಿಗೆ ಮೇಲೆ ದಾಳಿ ಮಾಡಿದರು. ಮಳಿಗೆಯ ಲಾಕರ್‌ನಲ್ಲಿದ್ದ 41 ಕೆ.ಜಿ. ಚಿನ್ನಾಭರಣ ಹಾಗೂ ಮನ್ಸೂರ್‌ ಖಾನ್‌ ಅವರ 0.32 ಎಂಎಂ ಪಿಸ್ತೂಲ್‌ (50 ಜೀವಂತ ಗುಂಡುಗಳ ಸಮೇತ) ಜಪ್ತಿ ಮಾಡಲಾಗಿದೆ.

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಮಳಿಗೆಯಲ್ಲಿ ಜನರ ಚಿನ್ನಾಭರಣವನ್ನು ಅಡವಿಟ್ಟುಕೊಂಡು ಸಾಲ ನೀಡಲಾಗುತ್ತಿತ್ತು. ಐದು ಸಾವಿರಕ್ಕೂ ಹೆಚ್ಚು ಮಂದಿ ಚಿನ್ನಾಭರಣ ಅಡವಿಟ್ಟಿರುವ ಮಾಹಿತಿ ಇದೆ. ನ್ಯಾಯಾಲಯದ ಅನುಮತಿ ಪಡೆದು ಬೆಳಿಗ್ಗೆ 9 ಗಂಟೆಗೆ ಮಳಿಗೆಯ ಬೀಗ ತೆರೆದ ಅಧಿಕಾರಿಗಳು, ರಾತ್ರಿವರೆಗೂ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ 10ಕ್ಕೂ ಹೆಚ್ಚು ಅಕ್ಕಸಾಲಿಗರೂ ಇದ್ದರು. ಮಳಿಗೆಯಲ್ಲಿ ಪ್ರತ್ಯೇಕ ಲಾಕರ್‌ಗಳನ್ನು ಮಾಡಿ ಚಿನ್ನಾಭರಣಗಳನ್ನು ಇರಿಸಲಾಗಿತ್ತು. ಆ ಎಲ್ಲ ಲಾಕರ್‌ಗಳನ್ನು ಪರಿಶೀಲಿಸಿದರು.

ವಂಚನೆಯಲ್ಲಿ ಸಚಿವರ ಶಾಮೀಲು: ಆರೋಪ

ಐಎಂಎ ವಂಚನೆ ಪ್ರಕರಣ ಪಶ್ಚಿಮ ಬಂಗಾಳದ ಶಾರದ ಚಿಟ್‌ಫಂಡ್‌ ಮಾದರಿಯ ಬಹು ಕೋಟಿ ಹಗರಣವಾಗಿದ್ದು, ಇದರಲ್ಲಿ ಹಿಂದಿನ ಮತ್ತು ಈಗಿನ ಸರ್ಕಾರಗಳ ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವಥ್ ನಾರಾಯಣ ದೂರಿದರು.

ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿರುವುದರಿಂದ ತನಿಖೆ ಹೊಣೆಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕು. ಎಸ್‌ಐಟಿ ತನಿಖೆ ನಡೆಸುವುದರಿಂದ ಸಾಕ್ಷ್ಯಗಳನ್ನು ಮುಚ್ಚುವ ಪ್ರಯತ್ನ ನಡೆಯಲಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಅಮಾಯಕ ಮುಸ್ಲಿಮರ ಹಣವನ್ನು ಲೂಟಿ ಮಾಡಿದ ಮನ್ಸೂರ್ ಖಾನ್‌ನನ್ನು ದೇಶ ಬಿಟ್ಟು ಹೋಗಲು ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಹಕಾರ ನೀಡಿದ್ದಾರೆ. ಜೂನ್‌ 6ರಂದು ಮನ್ಸೂರ್‌ನನ್ನು ತನಿಖೆಗೆ ಪೊಲೀಸರು ಕರೆಸಿದ್ದರು. ಆದರೆ, ಜೂನ್‌ 8ಕ್ಕೆ ದೇಶವನ್ನು ಬಿಟ್ಟುಹೋದ. ತನಿಖೆಗೆ ಕರೆಸಿದ್ದ ಸಂದರ್ಭದಲ್ಲಿ ಪಾಸ್‌ಪೋರ್ಟ್‌ ವಶಕ್ಕೆ ತೆಗೆದುಕೊಳ್ಳಬಹುದಿತ್ತು. ಅಧಿಕಾರಿಗಳು ಅದನ್ನು ಮಾಡಲಿಲ್ಲ ಎಂದು ಹೇಳಿದರು.

ಈ ಪ್ರಕರಣದಲ್ಲಿ ಸರ್ಕಾರದಲ್ಲಿರುವವರು ಶಾಮೀಲಾಗಿರುವುದರಿಂದ ರಾಜ್ಯದ ಅಧಿಕಾರಿಗಳಿಂದ ನ್ಯಾಯ ಸಿಗುವುದು ಕಷ್ಟ. ಆದ್ದರಿಂದ ಸಿಬಿಐ ಈ ತನಿಖೆಗೆ ಕೈಗೆತ್ತಿಕೊಳ್ಳುವುದು ಸೂಕ್ತ ಎಂದು ಅಶ್ವಥ್ ನಾರಾಯಣ ಹೇಳಿದರು.

ಐಎಂಎ ₹600 ಕೋಟಿ ಸಾಲ ಪಡೆಯಲು ಸರ್ಕಾರದಿಂದ ಎನ್‌ಒಸಿ ಕೇಳಿತ್ತು. ಒಂದು ವೇಳೆ ಎನ್ಒಸಿ ನೀಡಿದ್ದರೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕುತ್ತಿತ್ತು. ಕಳ್ಳನ (ಮನ್ಸೂರ್) ಹಣವನ್ನು ಕಳ್ಳರೇ (ರಾಜಕಾರಣಿಗಳು ಮತ್ತು ಅಧಿಕಾರಿಗಳು) ದರೋಡೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಸ್ತಿ ಮುಟ್ಟುಗೋಲು: ಕಂದಾಯ ಅಧಿಕಾರಿಗಳಿಗೆ ವರದಿ

ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು, ಕಂಪನಿ ಒಡೆತನದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಕಂದಾಯ ಅಧಿಕಾರಿಗಳಿಗೆ ಸದ್ಯದಲ್ಲೇ ವರದಿ ಸಲ್ಲಿಸಲಿದ್ದಾರೆ.

ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿ ಪರಾರಿಯಾಗಿರುವ ಕಂಪನಿಯ ಮಾಲೀಕ ಮನ್ಸೂರ್ ಖಾನ್‌ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡಿದ್ದ ಎಸ್ಐಟಿ, ಮನ್ಸೂರ್‌ ಖಾನ್‌ ಹಾಗೂ ಅವರ ಪತ್ನಿಯರ ಹೆಸರಿನಲ್ಲಿರುವ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಶಾಲೆಗಳ ಆಸ್ತಿ, ಅಪಾರ್ಟ್‌ಮೆಂಟ್ ಸೇರಿ ಒಟ್ಟು 28 ಸ್ಥಿರಾಸ್ತಿಗಳನ್ನು ಈಗಾಗಲೇ ಗುರುತಿಸಿದೆ. ಆ ಆಸ್ತಿಗಳನ್ನೇ ಉಲ್ಲೇಖಿಸಿ ಕಂದಾಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

‘ಕಂಪನಿಯಿಂದ ವಂಚನೆಗೀಡಾದ ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸಬೇಕು. ಹೀಗಾಗಿ, ದಾಖಲೆ ಸಮೇತ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ನೀಡಲಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

’ಆ ವರದಿಯನ್ನೇ ನ್ಯಾಯಾಲಯದ ಗಮನಕ್ಕೂ ತರಲಿದ್ದೇವೆ. ನ್ಯಾಯಾಲಯದ ನಿರ್ದೇಶನದಂತೆ ಮುಂದುವರಿಯಲಿದ್ದೇವೆ. ಕಂದಾಯ ಅಧಿಕಾರಿಗಳೇ ವಿಚಾರಣೆ ನಡೆಸಿ ಆಸ್ತಿ ಮುಟ್ಟುಗೋಲು ಸಂಬಂಧ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.