ADVERTISEMENT

ಸದಾಶಿವ ಆಯೋಗದ ವರದಿಜಾರಿಗೆ ತನ್ನಿ; ಕೆ.ಬಿ.ಶಾಣಪ್ಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:41 IST
Last Updated 6 ಜನವರಿ 2019, 13:41 IST
ಡಾ. ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಬಿಜೆಪಿ ಮುಖಂಡ ಕೆ.ಬಿ.ಶಾಣಪ್ಪ ಉದ್ಘಾಟಿಸಿದರು
ಡಾ. ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಬಿಜೆಪಿ ಮುಖಂಡ ಕೆ.ಬಿ.ಶಾಣಪ್ಪ ಉದ್ಘಾಟಿಸಿದರು   

ಕಲಬುರ್ಗಿ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಬಿ.ಶಾಣಪ್ಪ ಆಗ್ರಹಿಸಿದರು.

ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಾತಂಗ ವಿಕಾಸ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ; ಸಾಮಾಜಿಕ ನ್ಯಾಯದ ಪರಿಕಲ್ಪನೆ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಮತ್ತು ಮತದಾನದ ಹಕ್ಕಿನಿಂದಾಗಿ ನಮ್ಮೆಲ್ಲರಿಗೂ ಗಟ್ಟಿಯಾಗಿ ಮಾತನಾಡುವ ದನಿ ಬಂದಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದವರು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ವರದಿ ಜಾರಿ ಆಗುವವರೆಗೂ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ADVERTISEMENT

‘ಮಾದಿಗ ಸಮುದಾಯಕ್ಕೆ ಈಗ ಸರಿಯಾಗಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಹಿಂದೆ 10–15 ಜನ ಶಾಸಕರು, ಸಂಸದರು ಇರುತ್ತಿದ್ದರು. ಆ ಸಂಖ್ಯೆ ಈಗ 3–4ಕ್ಕೆ ಇಳಿದಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕನಾಗಿರುವುದು ಹೆಮ್ಮೆಯ ವಿಷಯ. ಇದೇ ರೀತಿ ಸಮುದಾಯದ ನೂರಾರು ಯುವಕರು ಬೆಳೆಯಬೇಕು’ ಎಂದು ಸಲಹೆ ನೀಡಿದರು.

‘ಪರಿಶಿಷ್ಟ ಜಾತಿಯ ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಾದಿಗ ಜನಾಂಗಕ್ಕೆ ಸಿಗಬೇಕಾದ ಪೂರ್ಣ ಪ್ರಮಾಣದ ಮೀಸಲಾತಿಯನ್ನು ನೀಡಬೇಕು’ ಎಂದರು.

ಕರ್ನಾಟಕ ರಾಜ್ಯ ಮಾತಂಗ ಸಾಹಿತ್ಯ ಪರಿಷತ್‌ನ ಡಾ. ಎ.ಕೆ.ಹಂಪಣ್ಣ, ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಅಧ್ಯಕ್ಷ ಅಂಬಣ್ಣ ಅರೋಲಿ, ಚಿಂತಕ ಡಾ. ದಾಸನೂರು ಕೂಸಣ್ಣ ವಿಷಯ ಮಂಡಿಸಿದರು.

ಹಂಪಿಯ ಮಾತಂಗ ಪರ್ವತದ ಮಾತಂಗ ಮಹರ್ಷಿ ಆಶ್ರಮದ ಪೀಠಾಧಿಪತಿ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ಪಾಲಿಕೆ ಸದಸ್ಯ ನಾಗರಾಜ ಗುಂಡಗುರ್ತಿ, ಮುಖಂಡರಾದ ಮಾಪಣ್ಣ ಹದನೂರು, ರಾಜು ವಾಡೇಕರ್, ವಿಜಯಕುಮಾರ ಕೌಡಿಯಾಳ, ಲಿಂಗರಾಜ ತಾರಫೈಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.