ಬೆಂಗಳೂರು: ‘ಜಾತಿ ಗಣತಿ ನಡೆಸಿ 10 ವರ್ಷ ಕಳೆದಿದೆ. ಈ ಅವಧಿಯಲ್ಲಿ ಒಂದು ಕೋಟಿ ಮಕ್ಕಳು ಜನಿಸಿದ್ದಾರೆ. ಇವರನ್ನು ಯಾವ ವರ್ಗಕ್ಕೆ ಸೇರಿಸುತ್ತೀರಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಹೊಸ ಪೀಳಿಗೆಯ ಭವಿಷ್ಯವೇನು? ಮೀಸಲಾತಿಯ ಮಾನದಂಡವೇನು’ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.
‘ಶ್ರೇಷ್ಠವಾದ ಸಿದ್ದಗಂಗಾ ಮಠಕ್ಕೇ ಸಮೀಕ್ಷೆ ಮಾಡುವವರು ಹೋಗಿಲ್ಲ. ದಾವಣಗೆರೆಯ ಶಾಸಕರೂ ಕೂಡ ಅದನ್ನೇ ಹೇಳಿದ್ದಾರೆ. ಜಾತಿ ಗಣತಿ ಮಾಡಿರುವ ವಿಧಾನವೇ ಅವೈಜ್ಞಾನಿಕ’ ಎಂದು ಅವರು ಹೇಳಿದರು.
‘ವರದಿಯಗೆ ಸಹಿ ಹಾಕದೆ ಕಾಂತರಾಜ ಅವರು ಓಡಿ ಹೋಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ತೆಗೆದುಕೊಂಡು ನೋಡಿದಾಗ ಅದು ಅಸಲಿ ಅಲ್ಲ. ಕೇವಲ ಒಂದು ಪ್ರತಿ ಎಂಬುದು ತಿಳಿದು ಬಂದಿದೆ. ಈ ಕುರಿತು ಹೆಗ್ಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು’ ಎಂದರು.
‘ಗುರುವಾರ ನಡೆದ ಸಚಿವ ಸಂಪುಟ ಸಭೆ ವ್ಯರ್ಥವಾಗಿದೆ. ಅಭಿಪ್ರಾಯ ನೀಡುವಂತೆ ಸಚಿವರಿಗೆ ಸೂಚಿಸಲಾಗಿದೆ. ಸಂಪುಟದ ಸಚಿವರನ್ನೇ ಜಾತಿ ಬಲೆಯಲ್ಲಿ ಸಿಕ್ಕಿ ಹಾಕಿಸಿ ಅಪಮಾನ ಮಾಡಲಾಗುತ್ತಿದೆ. ನವೆಂಬರ್‌ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗಿದ್ದು, ಆ ಸಮಯದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಸಿದ್ದರಾಮಯ್ಯ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದರು. ಆಗಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬಹುದಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.