ADVERTISEMENT

ಅಪರೂಪದ ಚಿಂಕಾರ ಸಂತತಿ ಪತ್ತೆ

ಮೊದಲ ಬಾರಿ ಕ್ಯಾಮೆರಾದಲ್ಲಿ ದಾಖಲಾದ ವಿರಳ ಜೀವಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 20:25 IST
Last Updated 22 ಫೆಬ್ರುವರಿ 2019, 20:25 IST
ಜಗಳೂರಿನ ರಂಗಯ್ಯದುರ್ಗ ಅರಣ್ಯಪ್ರದೇಶದಲ್ಲಿ ಕಂಡು ಬಂದಿರುವ ಚಿಂಕಾರ
ಜಗಳೂರಿನ ರಂಗಯ್ಯದುರ್ಗ ಅರಣ್ಯಪ್ರದೇಶದಲ್ಲಿ ಕಂಡು ಬಂದಿರುವ ಚಿಂಕಾರ   

ಜಗಳೂರು: ಅಳಿವಿನ ಅಂಚಿನಲ್ಲಿರುವ ಅಪರೂಪದ ಹುಲ್ಲೆ ಜಾತಿಗೆ ಸೇರಿದ ವನ್ಯಜೀವಿ ‘ಚಿಂಕಾರ‘ ಅಥವಾ ಸಣ್ಣ ಹುಲ್ಲೆ ತಾಲ್ಲೂಕಿನ ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾಮ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.

80 ಚದರ ಕಿಲೋ ಮೀಟರ್‌ ವಿಸ್ತೀರ್ಣ ಪ್ರದೇಶದ ಕೊಂಡುಕುರಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿಂಕಾರ ದಾಖಲಾಗಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಹಾಗೂ ಬಾಗಲಕೋಟೆ ಜಿಲ್ಲೆಯ ಎಡೇಹಳ್ಳಿ ಪ್ರದೇಶಗಳಲ್ಲಿ ಮಾತ್ರ ಚಿಂಕಾರ ಸಂತತಿ ನೆಲೆ ಕಂಡುಕೊಂಡಿದೆ. ಇದೀಗ ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯದಲ್ಲೂ ಇದು ನೆಲೆಸಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಸಂತಸಕ್ಕೆ ಕಾರಣವಾಗಿದೆ.

ಚಿಂಕಾರ, ಇಂಡಿಯನ್ ಗೆಜೆಲ್ ಹಾಗೂ ಕನ್ನಡದಲ್ಲಿ ‘ಸಣ್ಣಹುಲ್ಲೆ’ ಎಂದು ಕರೆಯಲಾಗುವ ಪ್ರಾಣಿಯ ವೈಜ್ಞಾನಿಕ ಹೆಸರು ‘ಗೆಜೆಲ್ಲಾ ಬೆನ್ನೆಟ್ಟಿ’. ಇರಾನ್, ಭಾರತ ಮತ್ತು ಪಾಕಿಸ್ತಾನ ಚಿಂಕಾರದ ಆವಾಸ ಸ್ಥಾನವಾಗಿದೆ. ಹುಲ್ಲೆ ಇರುವಿಕೆಯ ಬಗ್ಗೆ ಇಲ್ಲಿನ ಅರಣ್ಯ ಇಲಾಖೆಗೂ ಸ್ಪಷ್ಟ ಮಾಹಿತಿ ಇಲ್ಲ. ಇಲಾಖೆಯ ಯಾವುದೇ ದಾಖಲೆಗಳಲ್ಲೂ ಇದುವರೆಗೆ ಚಿಂಕಾರ ಹೆಸರಿನ ಪ್ರಸ್ತಾಪ ಇಲ್ಲ. ಸ್ಥಳೀಯರಿಗೂ ಇದರ ಹೆಸರು ತಿಳಿದಿಲ್ಲ.

ADVERTISEMENT

ಕೊಂಡುಕುರಿ ಅರಣ್ಯ ಪ್ರದೇಶದಲ್ಲಿ ಕೊಂಡುಕುರಿ ಮತ್ತು ಕೃಷ್ಣಮೃಗಗಳು ನೆಲೆಸಿವೆ. ಚಿಂಕಾರದ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯಿಂದ ಕೈಗೊಂಡ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿಂಕಾರ ಇರುವುದರ ಬಗ್ಗೆ ಪರಿಶೀಲಿಸಬೇಕಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಂಡುಬಂದಿರುವ ಪ್ರಾಣಿ ಹೆಣ್ಣು ಚಿಂಕಾರ ಎನ್ನುವುದು ಸ್ಪಷ್ಟವಾಗುತ್ತದೆ. ಸಣ್ಣದಾದ ಕೋಡುಗಳು ಹಾಗೂ ದಪ್ಪನೆಯ ಬಾಲ ಹೊಂದಿರುವ ಚಿಂಕಾರ ಒಣ ಹುಲ್ಲುಗಾವಲು ಪ್ರದೇಶದಲ್ಲಿ ವಾಸಿಸುವ, ನೀರಿನ ಅವಲಂಬನೆ ತೀರಾ ಕಡಿಮೆ ಇರುವ ವಿರಳ ಸಂಖ್ಯೆಯಲ್ಲಿರುವ ಜೀವಿ ಎಂದು ಖ್ಯಾತ ವನ್ಯಜೀವಿ ವಿಜ್ಞಾನಿ ಸಂಜಯ ಗುಬ್ಬಿ ಅಭಿಪ್ರಾಯಪಟ್ಟರು.

ಹುಲ್ಲೆ ಜಾತಿಯ ಕೃಷ್ಣಮೃಗ, ಕೊಂಡುಕುರಿ ಸಂತತಿ ಈ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿವೆ. ಜಗತ್ತಿನಲ್ಲೇ ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಸಂತತಿ ಸಂರಕ್ಷಣೆ ಹಿನ್ನೆಲೆಯಲ್ಲಿ ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಅವರ ಸಂಶೋಧನೆ ಮತ್ತು ಶ್ರಮದ ಫಲವಾಗಿ 2010ರಲ್ಲಿ 7,800 ಹೆಕ್ಟೇರ್ ವಿಸ್ತೀರ್ಣದ ಅರಣ್ಯವನ್ನು ಕೊಂಡುಕುರಿ ವನ್ಯಧಾಮ ಎಂದು ಘೋಷಿಸಲಾಗಿದೆ.

ತುಮಕೂರಿನ ಬುಕ್ಕಾಪಟ್ಟಣ ಅರಣ್ಯದಲ್ಲಿ ಸಂಜಯ ಗುಬ್ಬಿ ಅವರು ಕ್ಯಾಮೆರಾ ಟ್ರ್ಯಾಪ್ ಮೂಲಕ ಚಿಂಕಾರದ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಪರಿಣಾಮ ಕಳೆದ ತಿಂಗಳಷ್ಟೆ ಚಿಂಕಾರ ವನ್ಯಧಾಮವನ್ನಾಗಿ ಘೋಷಣೆ ಮಾಡಿರುವುದು ವಿಶೇಷ. ‘ಅರಣ್ಯದೊಳಗಿನ ಬಯಲು ಪ್ರದೇಶದಲ್ಲಿ ನೆಡುತೋಪು ಮಾಡುವುದರಿಂದ ಚಿಂಕಾರ ಸಂತತಿ ಕಣ್ಮರೆಯಾಗುತ್ತದೆ. ಸಾವಿರಾರು ವರ್ಷಗಳಿಂದ ನೆಲೆ ಕಂಡುಕೊಂಡು ಉಳಿದಿರುವ ಇಂತಹ ಪ್ರಾಣಿಗಳಿಗೆ ಕೃತಕವಾಗಿ ಕುಡಿಯುವ ನೀರು ಪೂರೈಕೆ ಮಾಡುವುದು ವೈಜ್ಞಾನಿಕವಾಗಿ ಸರಿಯಲ್ಲ’ ಎಂದು ಗುಬ್ಬಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.