ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರ ಮತ್ತು ತುಮಕೂರು ಜಿಲ್ಲೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ಕಾರ್ಮಿಕರಿಗೆ ವಸತಿ ನಿಲಯಗಳನ್ನು ಸ್ಥಾಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 18 ಸಾವಿರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಇವರಲ್ಲಿ ಶೇ 80ರಷ್ಟು ಮಹಿಳೆಯರಿದ್ದಾರೆ. ತುಮಕೂರು ಜಿಲ್ಲೆ ವಸಂತ ನರಸಾಪುರದಲ್ಲೂ ಗಣನೀಯ ಪ್ರಮಾಣದಲ್ಲಿ ಮಹಿಳಾ ಕಾರ್ಮಿಕರಿದ್ದಾರೆ. ಕೇಂದ್ರ ಸರ್ಕಾರದ ರಾಜ್ಯಗಳ ಬಂಡವಾಳ ಹೂಡಿಕೆ ಮೇಲಿನ ವಿಶೇಷ ನೆರವು ಯೋಜನೆ ಅಡಿ ಈ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು. ಒಟ್ಟು ₹193 ಕೋಟಿ ವೆಚ್ಚದಲ್ಲಿ ಕೆಐಎಡಿಬಿ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಈ ಯೋಜನೆಗೆ ಬೇಕಾಗಿರುವ ಜಮೀನನ್ನು ಕೆಐಎಡಿಬಿಯು ಉಚಿತವಾಗಿ ನೀಡಲಿದೆ. ವಸತಿ ನಿಲಯ ನಿರ್ಮಾಣವಾದ ನಂತರ ಕಾರ್ಯಾಚರಣೆ ಮತ್ತು ನಿರ್ವಹಣೆ ಅನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವಕ್ಕೆ ವಹಿಸಲಾಗುವುದು ಎಂದು ಅವರು ವಿವರಿಸಿದರು.
ಕ್ರೀಡಾಪಟುಗಳ ನೇಮಕಾತಿಗೆ ವಿಶೇಷ ನಿಯಮ: ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್, ಏಷಿಯನ್ ಕ್ರೀಡೆಗಳು, ಪ್ಯಾರಾ ಏಷಿಯನ್ ಕ್ರೀಡೆಗಳು ಮತ್ತು ಕಾಮನ್‌ವೆಲ್ತ್ ಕ್ರೀಡೆಗಳ ಪದಕ ವಿಜೇತರಿಗೆ ನೇರ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿ ಅವಕಾಶ ಕಲ್ಪಿಸಿರುವುದರಿಂದ ಮುಂಬಡ್ತಿಯಿಂದ ನೇಮಕ ಮಾಡಿಕೊಳ್ಳುವ ಹುದ್ದೆಗಳನ್ನು ಕೈಬಿಡಲು ಕಾಯ್ದೆಗೆ ಮಾಡಿರುವ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.
ಚಿಕ್ಕಮಗಳೂರಿಗೆ ಏರ್ ಸ್ಟ್ರಿಪ್: ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿಪಡಿಸಲು ಅಗತ್ಯವಿರುವ 17.01 ಎಕರೆ ಖಾಸಗಿ ಜಮೀನನ್ನು ಜಿಲ್ಲಾಧಿಕಾರಿಗಳ ಮೂಲಕ ಭೂಸ್ವಾಧೀನಪಡಿಸಿಕೊಳ್ಳಲು ಹೆಚ್ಚುವರಿ ಅನುದಾನ ₹17.05 ಕೋಟಿ ಬಿಡುಗಡೆಗೆ ಅನುಮೋದನೆ.
ಟೆಂಡರ್ ಅವಧಿ 3 ವರ್ಷ ವಿಸ್ತರಣೆ: ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳಿಗೆ ಹೊರ ಗುತ್ತಿಗೆ ಸಿಬ್ಬಂದಿ ಸೇವೆ ಪಡೆಯಲು ಮಾನವ ಸಂಪನ್ಮೂಲ ಸಂಸ್ಥೆಗಳನ್ನು ಆಯ್ಕೆ ಮಾಡಲು ಮೂರು ವರ್ಷಗಳ ಅವಧಿಗೆ ಇ–ಪ್ರೊಕ್ಯೂರ್‌ಮೆಂಟ್ ಮೂಲಕ ಇ–ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಿದೆ.
ಜಿಲ್ಲೆಗಳಲ್ಲಿ ಹೊರ ಗುತ್ತಿಗೆ ನೌಕರರ ಸೇವೆಯನ್ನು ಪಡೆಯಲು ಕೆಟಿಪಿಪಿ ನಿಯಮಗಳಲ್ಲಿ ಇ–ಟೆಂಡರ್ ಮೂಲಕ ಮಾನವ ಸಂಪನ್ಮೂಲ ಸಂಸ್ಥೆಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಪ್ರತಿ ವರ್ಷ ಟೆಂಡರ್ ಕರೆಯುವ ಬದಲು ಟೆಂಡರ್ ಅವಧಿ ಮೂರು ವರ್ಷಗಳಿಗೆ ನೀಡಲು ತೀರ್ಮಾನಿಸಲಾಗಿದೆ.
ಮುಂಬಡ್ತಿಗೆ ನಿಯಮ ಸಡಿಲ: ಮುದ್ರಣ– ಲೇಖನ ಸಾಮಗ್ರಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮಾತ್ರ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಪಡೆಯಲು ಅವಕಾಶವಿದೆ. ಆದರೆ ಈಗ 4 ವರ್ಷ ಸೇವೆ ಸಲ್ಲಿಸಿರುವ ಅಧಿಕಾರಿಗಳು ಲಭ್ಯ ಇಲ್ಲದ ಕಾರಣ ಮಾನದಂಡವನ್ನು ಒಂದು ವರ್ಷಕ್ಕೆ ನಿಗದಿ ಮಾಡಲು ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.