ADVERTISEMENT

‘ಸುಪ್ರೀಂ’ ತೀರ್ಪು ಮರೆಮಾಚಿದ ಕೆಪಿಎಸ್‌ಸಿ: ಮಾಹಿತಿ ಆಯೋಗ ಗರಂ

ವಿಜಯಕುಮಾರ್ ಎಸ್.ಕೆ.
Published 20 ಜೂನ್ 2020, 1:10 IST
Last Updated 20 ಜೂನ್ 2020, 1:10 IST
ಮಾಹಿತಿ ಆಯುಕ್ತ ರಮೇಶ್
ಮಾಹಿತಿ ಆಯುಕ್ತ ರಮೇಶ್   

ಬೆಂಗಳೂರು: 2015ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಕೆಪಿಎಸ್‌ಸಿ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಗರಂ ಆಗಿದೆ.

2015ರ ಬ್ಯಾಚ್‌ನಲ್ಲಿ ಅಭ್ಯರ್ಥಿಯಾಗಿದ್ದಆರ್.ವಿನಯಕುಮಾರ್ ಅವರು ಉತ್ತರ ಪತ್ರಿಕೆಯ ಪ್ರತಿ ಕೋರಿ 2020ರ ಜನವರಿ 16ರಂದು ಅರ್ಜಿ ಸಲ್ಲಿಸಿದ್ದರು. ಫೆಬ್ರುವರಿ 14ರಂದು ಹಿಂಬರಹ ನೀಡಿರುವ ಕೆಪಿಎಸ್‌ಸಿ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.‌

ಈ ಸಂಬಂಧ ವಿನಯಕುಮಾರ್‌ ಅವರು ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಆಯುಕ್ತ ಎನ್.ಪಿ.ರಮೇಶ್ ಅವರು, ‘ವಿನಯಕುಮಾರ್ ಅರ್ಜಿಯನ್ನು ಕೆಪಿಎಸ್‌ಸಿ ತಿರಸ್ಕಾರ ಮಾಡಿರುವುದು ಸಂವಿಧಾನ ಬಾಹಿರ ಹಾಗೂ ನ್ಯಾಯಾಂಗ ನಿಂದನೆ’ ಎಂದು ಹೇಳಿದ್ದಾರೆ.

ADVERTISEMENT

‘ಮಾಹಿತಿ ಹಕ್ಕು ಕಾಯ್ದೆಯನ್ನು ಕೆಪಿಎಸ್‌ಸಿ ಸರಿಯಾಗಿ ಅನುಷ್ಠಾನ ಮಾಡದಿರುವುದನ್ನು ಆಯೋಗ ಗಮನಿಸಿದೆ. ಉತ್ತರ ಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ನೀಡದೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿರುವುದು ಸಂಶಯ ಗಳಿಗೆ ಎಡೆಮಾಡಿಕೊಟ್ಟಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮುಂದಿನ 10 ದಿನಗಳಲ್ಲಿ ಅರ್ಜಿದಾರರು ಕೋರಿರುವ ಮಾಹಿತಿ ನೀಡಬೇಕು. ಇಲ್ಲದಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿನ್ನೆಲೆಯೇನು?: ವಿನಯಕುಮಾರ್ ಕೋರಿಕೆಗೆ ಹಿಂಬರಹ ನೀಡಿದ್ದ ಕೆಪಿಎಸ್‌ಸಿ, ‘2010ರ ಬ್ಯಾಚ್‌ನ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆದ ಎಲ್ಲರ ಉತ್ತರ ಪತ್ರಿಕೆಗಳನ್ನು ಕೋರಿ ಅಂಗೇಶ್‌ಕುಮಾರ್ ಎಂಬುವರ ಸಲ್ಲಿಸಿದ್ದ ಅರ್ಜಿಯನ್ನು 2018 ಫೆಬ್ರುವರಿ 20ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಆ ಪ್ರಕರಣವನ್ನು ಉಲ್ಲೇಖಿಸಿ ಉತ್ತರ ಪತ್ರಿಕೆ ನೀಡಲು ಸಾಧ್ಯವಿಲ್ಲ’ ಎಂದು
ವಿವರಿಸಿತ್ತು. ಆದರೆ, ಉತ್ತರ ಪ್ರದೇಶದ ಲೋಕಸೇವಾ ಆಯೋಗ ನಡೆಸಿದ್ದ ಮುಖ್ಯ ಪರೀಕ್ಷೆ ಬರೆದಿದ್ದ ಮೃದುಲಾ ಮಿಶ್ರಾ ಎಂಬುವರ ಪ್ರಕರಣದಲ್ಲಿ 2018ರ ಜುಲೈ 6ರಂದು ನೀಡಿರುವ ತೀರ್ಪಿನಲ್ಲಿ ‘ಉತ್ತರ ಪತ್ರಿಕೆ ನೀಡಬೇಕು. ಅದನ್ನು ಪಡೆಯುವುದು ಅವರ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

‘ಮುಖ್ಯ ಪರೀಕ್ಷೆಯ ನನ್ನ ಉತ್ತರ ಪತ್ರಿಕೆಯನ್ನಷ್ಟೇ ಕೋರಿದ್ದೇನೆ. ಅದನ್ನು ಕೊಡಲು ಕೆಪಿಎಸ್‌ಸಿ ಮೃದುಲಾ ಮಿಶ್ರಾ ಅವರ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳಬೇಕೆ ಹೊರತು ಪೂರ್ವಸಿದ್ಧತಾ ಪರೀಕ್ಷೆ ಬರೆದಿದ್ದ ಎಲ್ಲರ ಉತ್ತರ ಪತ್ರಿಕೆ ಪ್ರತಿ ಕೇಳಿದ ಅಂಗೇಶ್‌ಕುಮಾರ್ ಪ್ರಕರಣವನ್ನು ಅಲ್ಲ. ಸುಪ್ರೀಂಕೋರ್ಟ್ ಆದೇಶವನ್ನೇ ಕೆಪಿಎಸ್‌ಸಿ ಮರೆಮಾಚಿದೆ’ ಎಂಬುದು ವಿನಯಕುಮಾರ್ ಅವರ ವಾದ.

ಪರೀಕ್ಷಾ ನಿಯಂತ್ರಕರೇ ಮಾಹಿತಿ ಅಧಿಕಾರಿ

ಮಾಹಿತಿ ಹಕ್ಕು ಕಾಯ್ದೆಯನ್ನು ಕೆಪಿಎಸ್‌ಸಿ ಸರಿಯಾಗಿ ಅನುಷ್ಠಾನಗೊಳಿಸದ ಕಾರಣ ಪರೀಕ್ಷಾ ನಿಯಂತ್ರಕಿಯಾಗಿರುವ ಐಎಎಸ್ ಅಧಿಕಾರಿ ದಿವ್ಯಾ ಪ್ರಭು ಅವರನ್ನೇ ಮಾಹಿತಿ ಅಧಿಕಾರಿಯನ್ನಾಗಿ ನೇಮಿಸಲು ಎನ್‌.ಪಿ.ರಮೇಶ್ ನಿರ್ದೇಶನ ನೀಡಿದ್ದಾರೆ.

‘ಸದ್ಯ ಇರುವ ಸಾರ್ವಜನಿಕ ಮಾಹಿತಿ ಅಧಿಕಾರಿ ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೀಗಾಗಿ, ಕಾಯ್ದೆಯ ಉದ್ದೇಶ ಈಡೇರುತ್ತಿಲ್ಲ. ದಿವ್ಯಾಪ್ರಭು ಅವರನ್ನೇ ಮಾಹಿತಿ ಅಧಿಕಾರಿಯನ್ನಾಗಿ ನೇಮಿಸಬೇಕು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.