ADVERTISEMENT

ಮಧ್ಯಂತರ ಚುನಾವಣೆಗೆ ಹೋಗಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 18:46 IST
Last Updated 7 ಜೂನ್ 2019, 18:46 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ಮೈತ್ರಿ ಸರ್ಕಾರ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಲಿದ್ದು, ಮಧ್ಯಂತರ ಚುನಾವಣೆ ವಿಷಯ ಅಪ್ರಸ್ತುತ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸದ್ಯವೇ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬುದಾಗಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಮಜಾಯಿಷಿ ನೀಡಿದ ಮುಖ್ಮಂತ್ರಿ, ನಿಖಿಲ್‌ ಅವರ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ಪ್ರಕಟಿಸಿವೆ ಎಂದಿದ್ದಾರೆ.

‘ಪಕ್ಷದ ಕಾರ್ಯಕರ್ತರು ಚುನಾವಣೆ ಸಮಯದಲ್ಲಿ ಮಾತ್ರ ಹೋರಾಟ ಮಾಡದೇ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಜಯಗಳಿಸುವ ಸ್ಥಿತಿಯಲ್ಲಿ ಚುರುಕಾಗಿಟ್ಟಿರಬೇಕು ಎಂದಿದ್ದರು. ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ ಇಂತಹ ಮಾತುಗಳನ್ನು ಆಡಿದ್ದಾರೆ. ಆದರೆ, ಮಾಧ್ಯಮಗಳು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿವೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ADVERTISEMENT

‘ಅಧಿಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಿ’

ಕುಮಾರಸ್ವಾಮಿ ಅವರಿಗೆ ಅಧಿಕಾರ ನಡೆಸಲು ಆಗದಿದ್ದರೆ, ಆ ಸ್ಥಾನ ಬಿಟ್ಟು ಹೋಗಲಿ ನಾವು ಅಧಿಕಾರ ನಡೆಸಿ ತೋರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದರು.

ವಿಸರ್ಜನೆಯತ್ತ ಕಾಂಗ್ರೆಸ್‌: ಶೆಟ್ಟರ್

ಹುಬ್ಬಳ್ಳಿ: ‘ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ ವಿಸರ್ಜಿಸಬೇಕು ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದರು. ಈಗ ಕಾಂಗ್ರೆಸ್ಸಿಗರೇ ಅದರ ವಿಸರ್ಜನೆಗೆ ಮುಂದಾಗಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಮಹಾರಾಷ್ಟದಲ್ಲಿ ಪ್ರತಿಪಕ್ಷ ನಾಯಕರೇ ಪಕ್ಷ ತ್ಯಜಿಸಿದ್ದಾರೆ. ತೆಲಂಗಾಣದಲ್ಲಿಯೂ ಶಾಸಕರು ಪಕ್ಷ ಬಿಡುತ್ತಿದ್ದಾರೆ. ಪಕ್ಷವು ಅಸ್ತಿತ್ವ ಕಳೆದುಕೊಳ್ಳುತ್ತಾ ಸಾಗಿದೆ’ ಎಂದರು.

‘ಮೈತ್ರಿ ಸರ್ಕಾರದಲ್ಲಿನ ಭಿನ್ನಮತಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅದನ್ನು ಕಾಂಗ್ರೆಸ್ಸಿಗರಾದ ರೋಷನ್‌ ಬೇಗ್, ರಾಮಲಿಂಗಾರಡ್ಡಿ ಅವರು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಟೈಂ ಬಾಂಬ್‌ ಫಿಕ್ಸ್ ಆಗಿದೆ. ಅವರೂ ಅದರ ಸ್ಫೋಟಕ್ಕೆ ಬಲಿಯಾಗುವ ಅಪಾಯವಿರುವುದರಿಂದ ಕಾದು ನೋಡುತ್ತಿದ್ದಾರೆ. ಸ್ಫೋಟ ಆಗುವುದು ಖಚಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.