ADVERTISEMENT

ಜ್ವರ, ಶ್ವಾಸಕೋಶದ ಸೋಂಕು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಯಲಹಂಕದಲ್ಲಿ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:54 IST
Last Updated 28 ಡಿಸೆಂಬರ್ 2018, 19:54 IST
ಮಧುಕರ್ ಶೆಟ್ಟಿ
ಮಧುಕರ್ ಶೆಟ್ಟಿ   

ಬೆಂಗಳೂರು: ತೀವ್ರ ಜ್ವರಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ರಾಜ್ಯದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ರಾತ್ರಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಡಿ. 25ರಂದು ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರವಷ್ಟೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದರ ಬಳಿಕವೂ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

‘ಮಧುಕರ್ ಅವರ ಪಾರ್ಥೀವ ಶರೀರವನ್ನು ಸ್ವಂತ ಊರಿಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

1999ನೇ ಬ್ಯಾಚ್‌ ಅಧಿಕಾರಿ

ಹಿರಿಯ ಪತ್ರಕರ್ತರಾಗಿದ್ದ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾದ ಮಧುಕರ್ ಶೆಟ್ಟಿ, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಸಮಾಜ ಶಾಸ್ತ್ರ ವಿಷಯದಲ್ಲಿ ಎಂ.ಎ ಮುಗಿಸಿದ್ದರು. 1999ನೇ ಸಾಲಿನ ಐಪಿಎಸ್ ಅಧಿಕಾರಿಯಾದ ಅವರು, 2008ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಬಂದಿದ್ದರು. ವಿಧಾನಸೌಧದಲ್ಲೇ ಅಂದಿನ ಶಾಸಕ ವೈ. ಸಂಪಂಗಿ ಅವರನ್ನು ಬಂಧಿಸುವ ಮೂಲಕ ಖಡಕ್ ಅಧಿಕಾರಿ ಎನಿಸಿಕೊಂಡಿದ್ದರು.

ಉನ್ನತ ವ್ಯಾಸಂಗಕ್ಕಾಗಿ 2011ರಲ್ಲಿ ಸುದೀರ್ಘ ರಜೆ ಮೇಲೆ ಅಮೆರಿಕಕ್ಕೆ ತೆರಳಿದ್ದ ಶೆಟ್ಟಿ, ಐದು ವರ್ಷಗಳ ಬಳಿಕ ರಾಜ್ಯಕ್ಕೆ ವಾಪಸಾಗಿ ನೇಮಕಾತಿ ವಿಭಾಗದ ಡಿಐಜಿಯಾಗಿ ಕಾರ್ಯ ನಿರ್ವಹಿಸಿದ್ದರು.

ಮರುವರ್ಷವೇ ಪೊಲೀಸ್ ತರಬೇತಿ ಅಕಾಡೆಮಿ ನಿರ್ದೇಶಕರಾಗಿ ಮೈಸೂರಿಗೆ ವರ್ಗವಾದರು. 2017ರ ಮಾರ್ಚ್‌ನಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಧುಕರ್ ಶೆಟ್ಟಿ ಚಿಕ್ಕಮಗಳೂರು ಎಸ್ಪಿಯಾಗಿದ್ದಾಗಿ, ಜಿಲ್ಲಾಧಿಕಾರಿ ಹರ್ಷಗುಪ್ತ ಜತೆ ಸೇರಿ ದಲಿತರಿಗೆ ಒತ್ತುವರಿ ಜಮೀನು ಬಿಡಿಸಿ ಕೊಟ್ಟಿದ್ದರು. ಗ್ರಾಮಸ್ಥರು ಆ ಊರನ್ನು ‘ಗುಪ್ತಶೆಟ್ಟಿಹಳ್ಳಿ’ ಎಂದೇ ಕರೆಯುತ್ತಾರೆ.

ಯಲಹಂಕದಲ್ಲಿ ಅಂತಿಮ ದರ್ಶನ

ಯಲಹಂಕದಲ್ಲಿರುವ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತರಬೇತಿ ಶಾಲೆ ಆವರಣದಲ್ಲಿ ಶನಿವಾರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸ್ವಂತ ಊರಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಮುಖ್ಯಾಂಶಗಳು

* ಹೈದರಾಬಾದ್‌ನ ಕಾಂಟಿ ನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರು

* ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.