ADVERTISEMENT

ತಿದ್ದುಪಡಿಯಿಂದ ನೀರಾವರಿ ಜಮೀನಿಗೆ ವಿನಾಯ್ತಿ

ಭೂಸುಧಾರಣೆ ಕಾಯ್ದೆಯಿಂದ ಕೈಬಿಡಲು ಸರ್ಕಾರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:23 IST
Last Updated 26 ಜೂನ್ 2020, 16:23 IST

ಬೆಂಗಳೂರು:ಅಚ್ಚುಕಟ್ಟು ಪ್ರದೇಶಗಳ ಫಲವತ್ತಾದ ನೀರಾವರಿ ಭೂಮಿಯನ್ನು ‘ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ’ಯಿಂದ ವಿನಾಯ್ತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕೃಷಿಕರಲ್ಲದವರುಕೃಷಿ ಭೂಮಿಯನ್ನು ಖರೀದಿಸುವ ಕುರಿತು ಪರ– ವಿರೋಧ ಚರ್ಚೆ ತಾರಕಕ್ಕೇ ಏರಿರುವ ಬೆನ್ನಲ್ಲೇ, ನೀರಾವರಿ ಜಮೀನಿಗೆ ತಿದ್ದುಪಡಿಯಿಂದ ವಿನಾಯ್ತಿ ನೀಡಬೇಕು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರ ವಾದವನ್ನು ಒಪ್ಪಿಕೊಂಡು, ನೀರಾವರಿ ಭೂಮಿಯನ್ನು ತಿದ್ದುಪಡಿ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಒಲವು ತೋರಿದರು. ನೀರಾವರಿ ಜಮೀನು ಎಂದರೆ ಯಾವುದು ಎಂಬುದನ್ನು ಸ್ಪಷ್ಟವಾಗಿ ವರ್ಗೀಕರಣ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ನೀರಾವರಿ ಭೂಮಿಯನ್ನು ತಿದ್ದುಪಡಿ ವ್ಯಾಪ್ತಿಯಿಂದ ಹೊರಗಿಡಬೇಕಾದರೆ, ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಮೊದಲೇ ತಿದ್ದುಪಡಿ ಕರಡಿನಲ್ಲೂ ಮಾರ್ಪಾಡು ಮಾಡಬೇಕಾಗುತ್ತದೆ. ಅಲ್ಲದೆ, ಅಚ್ಚುಕಟ್ಟು ಪ್ರದೇಶಗಳಿಗೂ ರಿಯಾಯ್ತಿ ನೀಡಬೇಕಾಗುತ್ತದೆ ಎಂದು ಕೆಲವು ಸಚಿವರು ಪ್ರತಿಪಾದಿಸಿದರು ಎಂದು ಮೂಲಗಳು ಹೇಳಿವೆ.

‘ಅಚ್ಚುಕಟ್ಟು ಪ್ರದೇಶದಲ್ಲಿರುವ ನೀರಾವರಿ ಜಮೀನನ್ನು ತಿದ್ದುಪಡಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಅಭಿಪ್ರಾಯ ಸಚಿವ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು. ಮುಖ್ಯಮಂತ್ರಿಯವರೂ ನೀರಾವರಿ ಜಮೀನು ಬಿಟ್ಟು ತಿದ್ದುಪಡಿ ಮಾಡೋಣ ಎಂದಿದ್ದಾರೆ’ ಎಂಬುದನ್ನು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಖಚಿತಪಡಿಸಿದ್ದಾರೆ.

‘ನೀರಾವರಿ ಜಮೀನು ಎಂದರೆ ಯಾವುದು ಎಂಬುದನ್ನು ವರ್ಗೀಕರಿಸಬೇಕಾಗುತ್ತದೆ. ಕೆಲವರು ಬೋರ್‌ ಹಾಕಿಸಿ ಕೃಷಿ ಮಾಡುತ್ತಾರೆ, ಇನ್ನು ಕೆಲವರು ಕೆರೆಯ ನೀರು ಬಳಸಿ ಕೃಷಿ ಮಾಡುತ್ತಾರೆ. ಅಚ್ಚುಕಟ್ಟು ಪ್ರದೇಶದಲ್ಲೂ ವ್ಯವಸಾಯ ಮಾಡುತ್ತಾರೆ. ಅಚ್ಚುಕಟ್ಟು ಪ್ರದೇಶದ ಜಮೀನನ್ನು ಮಾತ್ರ ನೀರಾವರಿ ಜಮೀನು ಎಂದು ಪರಿಗಣಿಸಿ ಅದಕ್ಕೆ ವಿನಾಯ್ತಿ ನೀಡಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.