ADVERTISEMENT

ಪ್ರಜಾವಾಣಿ ವಿಶೇಷ: ನೀರಾವರಿ ತಾಂತ್ರಿಕ ಸಮಿತಿಗಳ ಬರ್ಕಾಸ್ತಿಗೆ ಶಿಫಾರಸು

ಅಂದಾಜು, ಟೆಂಡರ್‌ ಪರಿಶೀಲನೆಗೆ 27 ಸಮಿತಿಗಳಿದ್ದರೂ ನೂರಾರು ಕೋಟಿಯ ಅವ್ಯವಹಾರ

ರಾಜೇಶ್ ರೈ ಚಟ್ಲ
Published 10 ಅಕ್ಟೋಬರ್ 2021, 19:33 IST
Last Updated 10 ಅಕ್ಟೋಬರ್ 2021, 19:33 IST

ಬೆಂಗಳೂರು: ಜಲಸಂಪನ್ಮೂಲ ಇಲಾಖೆ ಅನುಷ್ಠಾನಗೊಳಿಸುವ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಯಾವುದೇ ಅಕ್ರಮಗಳು ನಡೆಯಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ 27 ತಾಂತ್ರಿಕ ಸಮಿತಿಗಳನ್ನು ರಚಿಸಿದೆ. ಆದರೂ ನೂರಾರು ಕೋಟಿ ರೂಪಾಯಿ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ.

ನಿವೃತ್ತ ಎಂಜಿನಿಯರ್‌ ಇನ್‌ ಚೀಫ್‌, ನಿವೃತ್ತ ಮುಖ್ಯ ಎಂಜಿನಿಯರ್‌ಗಳು ಸೇರಿ 76 ಅಧಿಕಾರೇತರ ಹುದ್ದೆಗಳು ಈ ಸಮಿತಿಯಲ್ಲಿವೆ.ನೀರಾವರಿ ಯೋಜನೆಗಳ ಅಂದಾಜು ಪಟ್ಟಿ, ಟೆಂಡರ್‌ಗಳನ್ನು ಈ ಸಮಿತಿಗಳೇ ಅಂತಿಮಗೊಳಿಸಬೇಕು. ಆದರೆ, ಈ ಸಮಿತಿಗಳಿಂದ ಅಕ್ರಮ ತಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 27 ಸಮಿತಿಗಳಲ್ಲಿ ಏಳನ್ನು ಮಾತ್ರ ಉಳಿಸಿಕೊಂಡು ಉಳಿದವನ್ನು ರದ್ದು ಮಾಡುವುದು ಸೂಕ್ತ ಎಂದು ಸತ್ಯಶೋಧನಾ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಡಿ.ವೈ. ಉಪ್ಪಾರ್‌ ಸಹಭಾಗಿತ್ವದ ‘ಎಡಿಯು ಇನ್ಪ್ರಾ’ ಎಂಬ ಕಂಪನಿ ಗುತ್ತಿಗೆ ವಹಿಸಿದ್ದ ₹ 17,685 ಕೋಟಿಗೂ ಹೆಚ್ಚು ಮೊತ್ತದ ಎಂಟು ಬೃಹತ್‌ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಗಳ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ರಚಿಸಿದ ಸತ್ಯಶೋಧನಾ ತಂಡ ಶಿಫಾರಸು ಮಾಡಿದೆ. ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ ಮತ್ತು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾಂತ್ರಿಕ ಸಲಹೆಗಾರರಾಗಿದ್ದ ಎಂ.ಕೆ. ವೆಂಕಟರಾಮ್‌ ಅವರು ಈ ತಂಡದ ಸದಸ್ಯರು.

ADVERTISEMENT

ನೀರಾವರಿ ಯೋಜನೆಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಹಿಂದೆ ಇಡೀ ರಾಜ್ಯಕ್ಕೆ ಬಾಳೆಕುಂದ್ರಿ ನೇತೃತ್ವದ ತಾಂತ್ರಿಕ ಉಪ ಸಮಿತಿ ಇತ್ತು. ಆ ಬಳಿಕ (1995–98) ಕೆ.ಸಿ. ರೆಡ್ಡಿ ನೇತೃತ್ವದಲ್ಲಿ ಒಂದೇ ಒಂದು ತಾಂತ್ರಿಕ ಸಲಹಾ ಸಮಿತಿ ಇತ್ತು. ಜಲಸಂಪನ್ಮೂಲ ಖಾತೆಗೆ ಸಚಿವರುಗಳು ಬಂದು ಹೋಗುತ್ತಿದ್ದಂತೆ, ತಮ್ಮ ಅವಧಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂಜಿನಿಯರ್‌ಗಳಿಗೆ ‘ಆಶ್ರಯ’ ಕಲ್ಪಿಸಲು ಹೊಸ ಹೊಸ ಸಮಿತಿಗಳನ್ನು ರಚಿಸುತ್ತಲೇ ಹೋದರು. ಇದೀಗ ಈ ಸಮಿತಿಗಳೇ ಸರ್ಕಾರಕ್ಕೆ ‘ಬಿಳಿಯಾನೆ’ ಆಗಿ ಪರಿಣಮಿಸಿವೆ.

ನಾಲ್ಕೂ ನಿಗಮಗಳು ಕೈಗೊಳ್ಳುವ ಕಾಮಗಾರಿಗಳ ಅಂದಾಜು, ವಿಸ್ತೃತ ಯೋಜನಾ ವರದಿ, ಟೆಂಡರ್‌ಗಳು ಮತ್ತು ಯೋಜನೆಯ ಹಣ ಹೆಚ್ಚಳವಾದರೆ ಪರಿಶೀಲಿಸಲು ಸದ್ಯ 19 ಅಂದಾಜು ಪರಿಶೀಲನಾ ಸಮಿತಿ, ತಲಾ 4 ಟೆಂಡರ್‌ ಪರಿಶೀಲನಾ ಸಮಿತಿ ಮತ್ತು ತಾಂತ್ರಿಕ ಉಪ ಸಮಿತಿ ಸೇರಿ ಒಟ್ಟು 27 ಸಮಿತಿಗಳಿವೆ. ಈ ಸಮಿತಿಗಳ ಕಾರ್ಯವೈಖರಿಯನ್ನು ವರದಿಯಲ್ಲಿ ಉಲ್ಲೇಖಿಸಿರುವ ಸತ್ಯಶೋಧನಾ ತಂಡ, ‘ಇವು ನಿವೃತ್ತ ಅಧಿಕಾರಿಗಳ ಪುನವರ್ಸತಿ ಕೇಂದ್ರಗಳಾಗಿ ಬದಲಾಗಿವೆ. ಸಭೆಗಳಲ್ಲೇ ಈ ಸಮಿತಿಗಳು ಕಾಲಹರಣ ಮಾಡುತ್ತಿವೆ’ ಎಂದು ಟೀಕಿಸಿದೆ.

ಈ 27 ಸಮಿತಿಗಳಲ್ಲಿರುವ ಒಟ್ಟು 76 ಮಂದಿಯಲ್ಲಿ 61 ಮಂದಿ ನಿವೃತ್ತ ಎಂಜಿನಿಯರ್‌ ಇನ್ ಚೀಫ್‌ ಮತ್ತು ನಿವೃತ್ತ ಮುಖ್ಯ ಎಂಜಿನಿಯರ್‌ಗಳು. ಕೆಲವರು ಒಂದಕ್ಕಿಂತ ಹೆಚ್ಚಿನ ಸಮಿತಿಗಳಲ್ಲಿದ್ದಾರೆ. ಉಳಿದ 15 ಮಂದಿಯಲ್ಲಿ ಐಐಎಸ್ಸಿಯ ನಿವೃತ್ತ ಪ್ರಾಧ್ಯಾಪಕರೊಬ್ಬರು ಕೆಬಿಜೆಎನ್‌ಎಲ್‌ನ 3 ಸಮಿತಿಗಳಲ್ಲಿ, ಎಂಜಿನಿಯರಿಂಗ್‌ ಕಾಲೇಜಿನ ಹಾಲಿ ಪ್ರಾಧ್ಯಾಪಕರೊಬ್ಬರು ವಿಜೆಎನ್‌ಎಲ್‌ನ 3 ಸಮಿತಿಗಳಲ್ಲಿ, ಐಐಎಸ್ಸಿಯ ಪ್ರಾಧ್ಯಾಪಕರೊಬ್ಬರು ಸಿಎನ್‌ಎನ್‌ಎಲ್‌ನ 3 ಸಮಿತಿಗಳಲ್ಲಿ, ನಿವೃತ್ತ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಒಬ್ಬರು ಕೆಎನ್ಎನ್‌ಎಲ್‌ನ 6 ಸಮಿತಿಗಳಲ್ಲಿ ಇದ್ದಾರೆ.

‘ಯೋಜನೆಗಳ ಅಂದಾಜು ಪಟ್ಟಿಗಳು ದೋಷಪೂರಿತವಾಗಿವೆ, ಹಳೆಯ ಮಣ್ಣಿನ ಮರು ಬಳಕೆ ಬಗ್ಗೆ ಲೆಕ್ಕ ಹಾಕುವಾಗ ತಪ್ಪುಗಳಾಗಿವೆ ಎಂದು ಹೇಳುತ್ತಾರೆ. ಹಾಗಿದ್ದರೆ, ಈ ಅಂದಾಜು ಪರಿಶೀಲನಾ ಸಮಿತಿ, ಟೆಂಡರ್ ಪರಿಶೀಲನಾ ಸಮಿತಿ, ಉನ್ನತಾಧಿಕಾರ ಸಮಿತಿಗಳಲ್ಲಿ ಇರುವವರೇನು ಎಂಜಿನಿಯರುಗಳಲ್ಲವೇ? ಗಾರೆ ಕೆಲಸದವರೇ?’ ಎಂದು ಮಲಪ್ರಭಾ ನಾಲೆ ಮತ್ತು ಉಪನಾಲೆಗಳ ಕಾಮಗಾರಿಯಲ್ಲಿ ₹ 400 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಶ್ರೀನಿವಾಸ ಗೌಡ ಪ್ರಶ್ನಿಸಿದ್ದಾರೆ. ಅವರು ನೀಡಿರುವ ದೂರಿನ ವಿಚಾರಣೆ ನಡೆಯುತ್ತಿದೆ.

‘ಕೇವಲ 7 ಸಮಿತಿಗಳು ಸಾಕು’

₹ 5 ಕೋಟಿಯಿಂದ ₹ 100 ಕೋಟಿವರೆಗಿನ ಯೋಜನೆಗಳ ಅಂದಾಜು ಮತ್ತು ಟೆಂಡರ್‌ಗಳನ್ನು ಪರಿಶೀಲಿಸಲುನಾಲ್ಕೂ ನಿಗಮಗಳಲ್ಲಿ ತಾಂತ್ರಿಕ ಪರಿಣತರನ್ನೊಳಗೊಂಡ ತಲಾ ಒಂದೊಂದು ಉಪ ಸಮಿತಿ, ₹ 100 ಕೋಟಿಗೂ ಹೆಚ್ಚು ಮೊತ್ತದ ಅಂದಾಜುಗಳನ್ನು ಪರಿಶೀಲಿಸಲು ನಾಲ್ಕೂ ನಿಗಮಗಳಿಗೆ ಸೇರಿ ಸರ್ಕಾರದ ಮಟ್ಟದಲ್ಲಿ ತಲಾ ಒಂದು ತಾಂತ್ರಿಕ ಪರಿಣತರ ಅಂದಾಜು ಉಪ ಸಮಿತಿ ಮತ್ತು ಒಂದುತಾಂತ್ರಿಕ ಪರಿಣತರ ಟೆಂಡರ್‌ ಉಪ ಸಮಿತಿ ಇದೆ. ₹ 5 ಕೋಟಿಗೂ ಹೆಚ್ಚು ಮೊತ್ತದ ಏತ ನೀರಾವರಿ ಯೋಜನೆಗಳ ಪರಿಶೀಲನೆಗೆ ಎಲ್ಲ ನಿಗಮಗಳಿಗೆ ಸೇರಿ ಸರ್ಕಾರದ ಮಟ್ಟದಲ್ಲಿ ಒಂದು ಎಲೆಕ್ಟ್ರೋ– ಮೆಕ್ಯಾನಿಕಲ್‌ ಪರಿಣತರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಈ ಪ್ರಸ್ತಾವಿತ ಸಮಿತಿಗಳ ಅನುಮೋದನೆಯ ಬಳಿಕವಷ್ಟೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿಗಮಗಳಿಗೆ ಅಧಿಕಾರ ನೀಡಬೇಕು ಎಂದು ಸತ್ಯಶೋಧನಾ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.