ADVERTISEMENT

ಸಿದ್ಧರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ; ಮೂಲ ಕಾಂಗ್ರೆಸಿಗರು ಶರಣಾದರೇ? - ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2021, 13:39 IST
Last Updated 24 ಮಾರ್ಚ್ 2021, 13:39 IST
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ   

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದು, ವಲಸೆ ನಾಯಕರ ಮುಂದೆ ಮೂಲ ಕಾಂಗ್ರೆಸಿಗರು ಶರಣಾಗಿದ್ದಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದ ಟ್ವೀಟ್ ಅನ್ನು ಉಲ್ಲೇಖ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕೊನೆಗೂ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅಂತಿಮಗೊಳಿಸಿದೆ. ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿದ್ಧರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. ಸಿದ್ಧರಾಮಯ್ಯ ಬಣ ಡಿ.ಕೆ. ಶಿವಕುಮಾರ್ಅವರಿಗೆ ಟ್ವೀಟ್ ಮೂಲಕ ಸ್ಪಷ್ಟ ಸಂದೇಶ ರವಾನಿಸಿರುವುದಾಗಿ ಹೇಳಿದೆ.

ವಲಸೆ ನಾಯಕರ ಮುಂದೆ ಮೂಲ ಕಾಂಗ್ರೆಸಿಗರು ಶರಣಾದರೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ADVERTISEMENT

ಕನಕಪುರ ಬಂಡೆ ಎಂದು ಮೆರೆಯುತ್ತಿದ್ದರವರಿಗೆ ಡೈನಾಮೇಟ್ ಇಟ್ಟು ಉಡಾಯಿಸುವ ಮುನ್ಸೂಚನೆಯನ್ನು ಸಿದ್ಧರಾಮಯ್ಯ ಬಣ ನೀಡುತ್ತಿದೆಯೇ? ಪರಮೇಶ್ವರ್‌ರನ್ನು ಸೋಲಿಸಿದವರು ಈಗ ಪಕ್ಷದ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೂ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಆರೋಪಿಸಿದೆ.

ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾವ ಮಹಾನಾಯಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲವೇ? ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಸಿದ್ದರಾಮಯ್ಯ ಬಣ ನಿಯಂತ್ರಿಸುತ್ತಿದೆಯೇ? ಕೂಸು ಹುಟ್ಟುವ ಮುನವೇ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣ ಕುಲಾವಿಗೆ ಹೊಡೆದಾಡುತ್ತಿರುವುದು ಹಾಸ್ಯಾಸ್ಪದ ಎಂದಿದೆ.

ಈ ಮೊದಲು ಕಾಂಗ್ರೆಸ್ ಟ್ವೀಟ್‌ನಲ್ಲಿ, ಲಂಚ, ಮಂಚದ ಭ್ರಷ್ಟ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ರಾಜ್ಯವನ್ನು ಸುಭಿಕ್ಷೆಯತ್ತ ಕೊಂಡೊಯ್ದಿದ್ದ ಕಾಂಗ್ರೆಸ್ ಸರ್ಕಾರವೇ ಮತ್ತೊಮ್ಮೆ ಬರಬೇಕೆಂದು ಜನ ದೇವರ ಮೊರೆ ಹೋಗಿದ್ದಾರೆ. ನೆರೆ ಸಂದರ್ಭದಲ್ಲಿ ದೇವರೇ ಗತಿ ಎಂದಿದ್ದ ಬಿಜೆಪಿ ನಾಯಕ ಶ್ರೀರಾಮುಲು ಹೇಳಿಕೆಯಂತೆ ಜನತೆ ಸರ್ಕಾರ ಬದಲಿಸಲು ದೇವರಿಗೆ ಹರಕೆ ಹೊರುತ್ತಿದ್ದಾರೆ ಎಂದು ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.