ADVERTISEMENT

ಪ್ರಸಾದ್‌ ರೆಡ್ಡಿ ವಿಚಾರಣೆ; ಮೂರನೇ ದಿನವೂ ಐ.ಟಿ ಶೋಧ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 16:37 IST
Last Updated 1 ಆಗಸ್ಟ್ 2018, 16:37 IST

ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ಜಿ. ಪ್ರಸಾದ್‌ ರೆಡ್ಡಿ ಅವರ ಮನೆ ಹಾಗೂ ಕಚೇರಿಯನ್ನು ಐ.ಟಿ. ಅಧಿಕಾರಿಗಳು ಸತತ ಮೂರನೇ ದಿನವೂ ಶೋಧಿಸಿದ್ದಾರೆ.

ಅವಿನಾಶ್‌ ಅಮರಲಾಲ್‌ ಕುಕ್ರೇಜ ಅವರ ವ್ಯವಹಾರ ಪಾಲುದಾರರು ಎನ್ನಲಾದ ಪ್ರಸಾದ್‌ ರೆಡ್ಡಿ ಅವರನ್ನು ಅಧಿಕಾರಿಗಳ ತಂಡ ನಿರಂತರವಾಗಿ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಮೂರು ಲಾಕರ್‌ಗಳಲ್ಲಿ ಬಚ್ಚಿಡಲಾಗಿದ್ದ ಹಣ, ಆಭರಣ ಮತ್ತು ಬೆಲೆಬಾಳುವ ಜಮೀನುಗಳ ದಾಖಲೆ ವಶಪಡಿಸಿಕೊಂಡಿರುವ ಐ.ಟಿ ಅಧಿಕಾರಿಗಳು, ರೆಡ್ಡಿ ಅವರ ಕೋರಮಂಗಲದ ಮನೆ ಮತ್ತು ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದರು.

ADVERTISEMENT

30ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಮಂಗಳವಾರ ಯಶವಂತಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಉದ್ಯಮವೊಂದರ ಮೇಲೆ ಹಾಗೂ ಅನೇಕ ಗಣ್ಯರ ಮನೆಗಳ ಮೇಲೂ ದಾಳಿ ಮಾಡಲಾಗಿದೆ.

ಪ್ರಸಾದ್‌ ರೆಡ್ಡಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಅವಿನಾಶ್‌ ಹಾಗೂ ಅವರ ತಂದೆ ಅಸರದಾಸ್‌ ಒಡೆತನದ ‘ಅನುಷ್ಕಾ ಎಸ್ಟೇಟ್ಸ್‌’ಗೆ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ಏಳು ಮಹತ್ವದ ಫೈಲುಗಳು ಲಾಕರ್‌ಗಳಲ್ಲಿ ಸಿಕ್ಕಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.