ADVERTISEMENT

ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡದ ಸರ್ಕಾರ: ಶೆಟ್ಟರ್ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 10:14 IST
Last Updated 2 ಡಿಸೆಂಬರ್ 2018, 10:14 IST
 ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಶೆಟ್ಟರ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಶೆಟ್ಟರ್ ಮಾತನಾಡಿದರು.   

ಹುಬ್ಬಳ್ಳಿ:ಸರ್ವಶಿಕ್ಷಣ ಅಭಿಯಾನದಡಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ಕೊಡಬೇಕಿತ್ತು. ಆದರೆ, ಒಂದು ಜೊತೆ ಮಾತ್ರ ಬಟ್ಟೆ ಕೊಟ್ಟಿದ್ದಾರೆ. ಇನ್ನು ಮೂರು ತಿಂಗಳು ಕಳೆದರೆ ಈ‌‌ ಸಲದ ಶೈಕ್ಷಣಿಕ ವರ್ಷವೇ ಮುಗಿದು ಹೋಗುತ್ತದೆ. ಇದು ರಾಜ್ಯ ಸರ್ಕಾರದ ‌ನಿರ್ಲಕ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬಟ್ಟೆ ಖರೀದಿಯಾಗಿಲ್ಲ. ಹರಿದ ಬಟ್ಟೆ ಹಾಕಿಕೊಂಡು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗಿದೆ. ಕಮೀಷನ್ ಆಸೆಗೆ ಸರ್ಕಾರ ದೊಡ್ಡ ಕಂಪನಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ನಂತರ ನಾವು ಹೋರಾಟ ಮಾಡಿದ ಬಳಿಕ ಎಸ್ ಡಿಎಂಸಿ ಮೂಲಕ ಸಮವಸ್ತ್ರ ವಿತರಿಸಲು ಆರಂಭಿಸಲಾಯಿತು ಎಂದರು.

ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಕೊಟ್ಟರೂ ರಾಜ್ಯ ಸರ್ಕಾರ ಕೊಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿವೆ. ಆದ್ದರಿಂದ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಖಂಡಿಸಿ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು.
ಡಿಸೆಂಬರ್ 10ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು‌. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೋರಾಟ‌ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಸತ್ತು ಹೋಗಿರುವ ರಾಜ್ಯ ಸರ್ಕಾರ: ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರಾಜ್ಯ ಸರ್ಕಾರ ಸತ್ತುಹೋಗಿದೆ ಎನ್ನುವ ಭಾವನೆ ಮೂಡುತ್ತಿದೆ.‌ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ.

ಹಾಸನ, ರಾಮನಗರ, ಮಂಡ್ಯಗಳನ್ನು ಮಾತ್ರ ರಾಜ್ಯ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದವರು ತಮಗೆ ಮತಹಾಕಿಲ್ಲ ಎನ್ನುವ ಭಾವನೆ ಅವರಲ್ಲಿದೆ. ರಾಜ್ಯ ಸರ್ಕಾರ ದಪ್ಪು ಚರ್ಮದ ಸರ್ಕಾರ. ಮುಖ್ಯಮಂತ್ರಿ ಬಂಡತನದಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಬರಗಾಲದ‌ ನೆಪವೊಡ್ಡಿ ಉತ್ಸವಗಳನ್ನು ‌ರದ್ದು ಮಾಡುವುದಾದರೆ ಯಾವ ಉತ್ಸವಗಳನ್ನೂ ನಡೆಸಬಾರದಿತ್ತು ಎಂದ ಅವರು, ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಬೇಕೆಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.