ADVERTISEMENT

ಅಪರಾಧ ಮುಕ್ತಕ್ಕೆ ‘ಜನ ವಿಶ್ವಾಸ’: 13 ಕಾಯ್ದೆಗಳ ತಿದ್ದುಪಡಿಗೆ ಮುಂದಾದ ಸರ್ಕಾರ

ಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ಬದಲು ದಂಡ

ರಾಜೇಶ್ ರೈ ಚಟ್ಲ
Published 5 ಜುಲೈ 2025, 0:50 IST
Last Updated 5 ಜುಲೈ 2025, 0:50 IST
.
.   

ಬೆಂಗಳೂರು: ಸಣ್ಣ ಅಪರಾಧಗಳಿಗೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ‘ಅಪರಾಧ ಮುಕ್ತ’ಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಮೂಲಕ, ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಲು ಮುಂದಡಿ ಇಟ್ಟಿದೆ.

ಈ ಉದ್ದೇಶದಿಂದ ಒಟ್ಟು 13 ರಾಜ್ಯ ಕಾಯ್ದೆಗಳು ಮತ್ತು ಎರಡು ರಾಜ್ಯ ನಿಯಮಗಳನ್ನು ತಿದ್ದುಪಡಿ ಮಾಡಲು ‘ಕರ್ನಾಟಕ ಜನ ವಿಶ್ವಾಸ’ (ನಿಬಂಧನೆಗಳ ತಿದ್ದುಪಡಿ) ಮಸೂದೆ– 2025’ರ ಕರಡನ್ನು ಕಾನೂನು ಮತ್ತು ಸಂಸದೀಯ ಇಲಾಖೆ ಸಿದ್ಧಪಡಿಸಿದೆ. 

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಈ ಪ್ರಸ್ತಾವದಂತೆ ಕರಡು ಮಸೂದೆಯನ್ನು ತಯಾರಿಸಲಾಗಿದೆ. ಮಸೂದೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ, ಸಹಕಾರ, ಇಂಧನ, ಕಂದಾಯ, ಜಲಸಂಪನ್ಮೂಲ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳು ಆಡಳಿತ ಇಲಾಖೆಗಳಾಗಿವೆ. ಹೀಗಾಗಿ, ಕರಡು ಮಸೂದೆಯನ್ನು ಈ ಇಲಾಖೆಗಳ ಅಭಿಪ್ರಾಯ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕಳುಹಿಸಿದ್ದಾರೆ ಎಂದು ಸಂಸದೀಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಕೇಂದ್ರ ಸರ್ಕಾರವು 2023ರಲ್ಲಿಯೇ ‘ಜನ ವಿಶ್ವಾಸ’ (ನಿಬಂಧನೆಗಳ ತಿದ್ದುಪಡಿ) ಕಾಯ್ದೆಯನ್ನು ರೂಪಿಸಿದೆ. ಇದೇ ಮಾದರಿಯ ಕಾಯ್ದೆ ಜಾರಿಗೆ ಮಧ್ಯಪ್ರದೇಶ ಸರ್ಕಾರ ‘ಜನ ವಿಶ್ವಾಸ ಮಸೂದೆ–2025’ ಅನ್ನು ರೂಪಿಸಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡಾ ಕಾಯ್ದೆಗಳ ತಿದ್ದುಪಡಿಗೆ ಮಸೂದೆ ರೂಪಿಸಿದ್ದು, ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ಕಾಯ್ದೆಗಳಲ್ಲಿರುವ ತಿದ್ದುಪಡಿಗೆ ಪ್ರಸ್ತಾಪಿಸಿರುವ ಸೆಕ್ಷನ್‌ಗಳನ್ನು ಪಟ್ಟಿ ಮಾಡಲಾಗಿದೆ. ಪ್ರಸ್ತಾವಿತ ತಿದ್ದುಪಡಿಗಳಿಂದ ಅನೇಕ ಸಣ್ಣ ಅಪರಾಧಗಳು ಅಪರಾಧ ಮುಕ್ತಗೊಳ್ಳಲಿವೆ. ಜೈಲು ಶಿಕ್ಷೆಯು ದಂಡವಾಗಿ ಬದಲಾಗಲಿದೆ. ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ತೆಗೆದು ಹಾಕಿ ದಂಡದ ಮೊತ್ತವನ್ನು ಹೆಚ್ಚಿಸಲು ಕೂಡಾ ಅವಕಾಶ ಆಗಲಿದೆ ಎಂದು ಮೂಲಗಳು ಹೇಳಿವೆ.

ಉದಾಹರಣೆಗೆ, ಉದ್ದೇಶಿತ ಮಸೂದೆಯಲ್ಲಿ ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959’ರ ಸೆಕ್ಷನ್‌ 109ರಲ್ಲಿ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಎನ್ನುವುದನ್ನು ಕೈಬಿಡಲು ಮತ್ತು ₹3 ಸಾವಿರ ದಂಡವನ್ನು ₹30 ಸಾವಿರಕ್ಕೆ ಹೆಚ್ಚಿಸುವ ತಿದ್ದುಪಡಿಯನ್ನು ಪ್ರಸ್ತಾವಿಸಲಾಗಿದೆ. ‘ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ– 1997’ರ ಸೆಕ್ಷನ್‌ 68ರಲ್ಲಿ ಆರು ತಿಂಗಳು ಹಾಗೂ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವುದನ್ನು ಕೈಬಿಟ್ಟು ದಂಡ ವಿಧಿಸಲು ಮಾತ್ರ ಅವಕಾಶ ಕಲ್ಪಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.  

‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ 1961’ರಲ್ಲಿ ಸೆಕ್ಷನ್‌ 4 ಸಂಸ್ಥೆಗಳ ನೋಂದಣಿಗೆ ಸಂಬಂಧಿಸಿದ್ದಾಗಿದೆ. ಉದ್ಯೋಗದಾತನು ಡೀಮ್ಡ್ ನೋಂದಣಿಯ ಪ್ರಯೋಜನವನ್ನು ತಪ್ಪಾಗಿ ಕ್ಲೈಮ್ ಮಾಡಿದ್ದರೆ ಮತ್ತು ಸ್ವಯಂ ಪ್ರಮಾಣಪತ್ರವನ್ನು ಪ್ರದರ್ಶಿಸಿದ ಅಪರಾಧವು ಸಾಬೀತಾದರೆ ಆರು ತಿಂಗಳು ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಲು ಅವಕಾಶವಿದೆ. ಇಲ್ಲಿಯೂ ಜೈಲು ಶಿಕ್ಷೆಯನ್ನು ಕೈಬಿಟ್ಟು ದಂಡ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ. ಹೀಗೆ, ಜನ ವಿಶ್ವಾಸ’ ಮಸೂದೆಯ ಮೂಲಕ ಎಲ್ಲ 13 ಕಾಯ್ದೆಗಳ ತಿದ್ದುಪಡಿ ಮಾಡಿ ಸಣ್ಣ ಅಪರಾಧಗಳು, ನಿಯಮಗಳ ಉಲ್ಲಂಘನೆಗೆ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಲು ಉದ್ದೇಶಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ತಿದ್ದುಪಡಿಗೆ ಪ್ರಸ್ತಾಪಿಸಿರುವ ಕಾಯ್ದೆಗಳು

1. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959

2. ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ–1997

3. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ–1961

4. ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ–1976

5. ಕರ್ನಾಟಕ ಮುನ್ಸಿಪಾಲಿಟಿಗಳ ಕಾಯ್ದೆ–1964

6. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961

7. ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಕಾಯ್ದೆ–2020

8. ಕರ್ನಾಟಕ ಲಿಫ್ಟ್ಸ್ ಎಸ್ಕಲೇಟರ್ಸ್‌ ಮತ್ತು ಪ್ಯಾಸೆಂಜರ್ ಕನ್ವೇಯರ್ ಕಾಯ್ದೆ–2012

9. ಕರ್ನಾಟಕ ಸ್ಟ್ಯಾಂಪ್‌ ಕಾಯ್ದೆ–1957

10. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮ ಹಾಗೂ ನಿಯಂತ್ರಣ) ಕಾಯ್ದೆ–2011

11. ಕರ್ನಾಟಕ ಭೂ ಸುಧಾರಣೆ ಕಾಯ್ದೆ–1961

12. ಕರ್ನಾಟಕ ಬಾಡಿಗೆ ಕಾಯ್ದೆ–1999

13. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ– 1993

ಏನಿದು ‘ಜನ ವಿಶ್ವಾಸ‘  

ಕೇಂದ್ರ ಸರ್ಕಾರವು ಸಣ್ಣ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಅಪರಾಧ ಮುಕ್ತಗೊಳಿಸಲು (ಡಿ ಕ್ರಿಮಿನಲೈಸೇಷನ್) ಮತ್ತು ತರ್ಕಬದ್ಧಗೊಳಿಸಲು 2023ರಲ್ಲಿ ‘ಜನ್ ವಿಶ್ವಾಸ್’ ಮಸೂದೆ ರೂಪಿಸಿತ್ತು. ಆ ಮೂಲಕ 42 ವಿವಿಧ ಕಾಯ್ದೆಗಳ ಅಡಿಯಲ್ಲಿ 183 ಅಪರಾಧಗಳನ್ನು ‘ಅಪರಾಧ ಮುಕ್ತ’ಗೊಳಿಸಿದೆ. ಸಣ್ಣ ತಾಂತ್ರಿಕ ಮತ್ತು ಕಾರ್ಯವಿಧಾನದ ಲೋಪ ಎಸಗಿದ ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸುವುದನ್ನು ತೆಗೆದುಹಾಕಿ ದಂಡ ಮಾತ್ರ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸಿದೆ. ಕಾಯ್ದೆ ತಿದ್ದುಪಡಿಯು ಅನಗತ್ಯ ಕಾನೂನು ಅಡಚಣೆಗಳನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ. ಇದರಿಂದ ನ್ಯಾಯಾಂಗದ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ರಾಜ್ಯ ಸರ್ಕಾರಗಳೂ ಕಾಯ್ದೆ ತಿದ್ದುಪಡಿಗೆ ‘ಜನ ವಿಶ್ವಾಸ’ ಮಸೂದೆ ರೂಪಿಸುವಂತೆ ಸಲಹೆ ನೀಡಿತ್ತು ಎಂದು ಸಂಸದೀಯ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.