ಹೈಕೋರ್ಟ್
ಬೆಂಗಳೂರು: ‘ಜಯದೇವ ಹೃದ್ರೋಗ ಸಂಸ್ಥೆಗೆ, ಅದರ ಹೃದಯವೇ ಸರಿಯಾದ ಸ್ಥಳದಲ್ಲಿ ಇಲ್ಲ’ ಎಂದು ಕುಟುಕಿರುವ ಹೈಕೋರ್ಟ್, ‘ಸಂಸ್ಥೆಯಲ್ಲಿ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ 10ಕ್ಕೂ ಹೆಚ್ಚು ಅರ್ಜಿದಾರ ನರ್ಸ್‌ಗಳನ್ನು ಕಾಯಂಗೊಳಿಸುವಂತೆ ಆದೇಶಿಸಿದೆ.
ಈ ಕುರಿತಂತೆ ಬಿ.ಜೆ.ರಾಣಿ ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನಿಮ್ಮ ಸೇವೆಯನ್ನು ಕಾಯಂಗೊಳಿಸಲು ಆಗದು’ ಎಂದು ಸಂಸ್ಥೆಯು ಅರ್ಜಿದಾರರಿಗೆ ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.
‘ಅರ್ಜಿದಾರರು 2004 ರಿಂದ 2007ರ ನಡುವಿನ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ನೇಮಕಗೊಂಡು ಸ್ಟಾರ್ಫ್ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಹತ್ತು ವರ್ಷ ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನಗಳ ಬ್ರೇಕಿಂಗ್ ಅವಧಿಯನ್ನು ನಿರ್ಲಕ್ಷಿಸಬೇಕು’ ಎಂದು ನ್ಯಾಯಪೀಠ, ಜಯದೇವ ಸಂಸ್ಥೆಗೆ ನಿರ್ದೇಶಿಸಿದೆ.
‘ರಾಜ್ಯದ ಅತ್ಯುತ್ತಮ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದೆನಿಸಿರುವ ಜಯದೇವ ಸಂಸ್ಥೆಯು ರಾಜ್ಯಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಧ್ಯಕ್ಷರಾಗಿರುವ ಇದರ ಆಡಳಿತ ಮಂಡಳಿಯು ತನ್ನದೇ ಆಸ್ಪತ್ರೆಯ ನರ್ಸ್‌ಗಳ ವಿಚಾರದಲ್ಲಿ ಅನ್ಯಾಯದಿಂದ ನಡೆದುಕೊಳ್ಳುವುದು ಸರಿಯಲ್ಲ. ಸಿಬ್ಬಂದಿಯ ಅನುಭವವನ್ನು ಕಾನೂನಾತ್ಮಕವಾಗಿ ಪರಿಗಣಿಸಿ ಅವರ ಸೇವೆ ಕಾಯಂ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ರಂಗನಾಥ ಜೋಯಿಸ್ ವಾದ ಮಂಡಿಸಿದ್ದರು.
ಕೋರಿಕೆ ಏನಿತ್ತು?:
ನಮ್ಮ ಸೇವೆ ಕಾಯಮಾತಿಗೆ ಸಂಬಂಧಿಸಿದಂತೆ ‘ಜಯದೇವ ಹೃದಯ ರಕ್ತನಾಳದ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ’ಯು ಜೂನ್ 2ರಂದು ನೀಡಿರುವ ಹಿಂಬರಹ ಏಕಪಕ್ಷೀಯ, ಕಾನೂನು ಬಾಹಿರವಾಗಿದ್ದು, ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯೂ ಆಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು. ನಮ್ಮ ಸೇವೆಯನ್ನು ಕಾಯಂಗೊಳಿಸಲು ಹಾಗೂ ಕಾನೂನುಬದ್ಧವಾಗಿ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.