ADVERTISEMENT

ಕುಮಾರ ‘ವಿಶ್ವಾಸ’ಕ್ಕೆ ದೋಸ್ತಿ ಸೆಣಸಾಟ; ಸುಪ್ರೀಂಕೋರ್ಟ್‌ನತ್ತ ಎಲ್ಲರ ಕಣ್ಣು

ಸರ್ಕಾರ ರಚನೆ ಭರವಸೆಯಲ್ಲಿ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:58 IST
Last Updated 15 ಜುಲೈ 2019, 19:58 IST
ವಿಧಾನ ಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸಚಿವ ಸಂಪುಟದ ಸಚಿವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ
ವಿಧಾನ ಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸಚಿವ ಸಂಪುಟದ ಸಚಿವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಾಸಕರ ಸರಣಿ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರವು ಅಲ್ಪಮತದತ್ತ ಹೊರಳಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೇ 18ರ ಗುರುವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.

‘ಸರ್ಕಾರ ಪತನವಾಗಿಯೇ ಹೋಯಿತು’ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ, ಸರ್ಕಾರ ಉಳಿಸಿಕೊಳ್ಳುವ ಸಣ್ಣಪುಟ್ಟ ಅವಕಾಶಗಳು ಮೈತ್ರಿಕೂಟಕ್ಕೆ ತೆರೆದುಕೊಳ್ಳುತ್ತಿವೆ. ಅತ್ತ ಮುಂಬೈನಲ್ಲಿ ಮೊಕ್ಕಾಂ ಮಾಡಿರುವ ಅತೃಪ್ತ ಶಾಸಕರು, ‘ರಾಜೀನಾಮೆಯ ತಮ್ಮ ನಿರ್ಧಾರ ಅಚಲ’ ಎಂದು ಖಚಿತವಾಗಿಯೇ ಹೇಳುತ್ತಿದ್ದಾರೆ. ಇದರಿಂದ ಬಿಜೆಪಿ ನಾಯಕರ ಹುಮ್ಮಸ್ಸು ಹೆಚ್ಚುತ್ತಿದ್ದು, ನಾಲ್ಕೈದು ದಿನಗಳೊಳಗೆ ಹೊಸ ಸರ್ಕಾರ ರಚಿಸುವ ಭರವಸೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

‘ಸಭಾಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ರಾಜೀನಾಮೆ ಸ್ವೀಕರಿಸಲು ವಿಳಂಬ ಮಾಡುತ್ತಿದ್ದಾರೆ. ನಮ್ಮ ನೆರವಿಗೆ ಬನ್ನಿ’ ಎಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕಾಂಗ್ರೆಸ್–ಜೆಡಿಎಸ್‌ನ 15 ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದೆ. ಹೀಗಾಗಿ, ಸುಪ್ರೀಂಕೋರ್ಟ್‌ನತ್ತ ಆಡಳಿತಾರೂಢ ಮೈತ್ರಿಕೂಟದ ಹಾಗೂ ವಿರೋಧ ಪಕ್ಷ ಬಿಜೆಪಿಯ ನಾಯಕರು ಕಣ್ಣು ನೆಟ್ಟಿದ್ದಾರೆ.

ADVERTISEMENT

ಮತ್ತೆರಡು ಅವಕಾಶ:‘ತಕ್ಷಣಕ್ಕೆ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ. ವಿಚಾರಣೆ ನಡೆಸಿದ ಬಳಿಕ ತೀರ್ಮಾನಿಸುವೆ’ ಎಂದು ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಹೇಳಿದ್ದರಿಂದಾಗಿ ಮೈತ್ರಿ ಸರ್ಕಾರಕ್ಕೆ ತಾತ್ಕಾಲಿಕ ಜೀವದಾನ ಸಿಕ್ಕಿತ್ತು. ವಿಧಾನಸಭೆ ಕಲಾಪ ಶುಕ್ರವಾರ ಆರಂಭವಾದಾಗ, ‘ವಿಶ್ವಾಸ ಮತ ಸಾಬೀತುಪಡಿಸುವ ನಿರ್ಣಯ ಮಂಡಿಸಲು ದಿನಾಂಕ ಗೊತ್ತುಮಾಡಿ’ ಎಂದು ಮುಖ್ಯಮಂತ್ರಿಯೇ ಕೇಳಿದ್ದರು. ಇದರಿಂದಾಗಿ ಸರ್ಕಾರ ಉಳಿಸಿಕೊಳ್ಳಲು ಮತ್ತೆರಡು ದಿನ ಸಮಯ ಸಿಕ್ಕಂತಾಗಿತ್ತು.

ಸೋಮವಾರ ನಡೆದ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸ–ಅವಿಶ್ವಾಸದ ಚರ್ಚೆ ಬಂದಿತು. ‘ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಕಲಾಪ ನಡೆಸುವುದು ಸರಿಯಲ್ಲ. ಇಂದೇ ವಿಶ್ವಾಸ ಮತ ಸಾಬೀತುಪಡಿಸಲಿ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಪಟ್ಟು ಹಿಡಿದರು. ಶುಕ್ರವಾರ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪ್ರತಿಪಾದಿಸಿದರು. ಅದಕ್ಕೆ ಬಿಜೆಪಿ ಒಪ್ಪಲಿಲ್ಲ. ಕೊನೆಗೆ ಬುಧವಾರವೇ ಮಂಡಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಎರಡೂ ಕಡೆಯವರ ವಾದ ಆಲಿಸಿದ ಸಭಾಧ್ಯಕ್ಷರು, ಗುರುವಾರ ಸಮಯ ನಿಗದಿ ಮಾಡಿದರು. ಈ ಚರ್ಚೆಯಿಂದಾಗಿ 3 ಗಂಟೆ ವಿಳಂಬವಾಗಿ ಕಲಾಪ ಆರಂಭವಾಯಿತು. ಕಲಾಪ ಸಲಹಾ ಸಮಿತಿಯ ತೀರ್ಮಾನವನ್ನು ಪ್ರಕಟಿಸಿದ ಸಭಾಧ್ಯಕ್ಷರು, ಎರಡು ದಿನ ಕಲಾಪ ಇರುವುದಿಲ್ಲ ಎಂದು ಸದನದ ಗಮನಕ್ಕೆ ತಂದರು.

ಈ ಬೆಳವಣಿಗೆಯಿಂದಾಗಿ, ಸರ್ಕಾರ ಉಳಿಸಿಕೊಳ್ಳಲು–ವಿಶ್ವಾಸ ಮತ ಸಾಬೀತುಪಡಿಸುವ ಅವಕಾಶವನ್ನು ವಿಸ್ತರಿಸಿಕೊಳ್ಳಲು ಮತ್ತೆ ಎರಡು ದಿನಗಳ ಅವಕಾಶ ಮೈತ್ರಿ ಕೂಟಕ್ಕೆ ದೊರೆಯಿತು.

‘ರಾಜೀನಾಮೆ ಕೊಟ್ಟಿರುವ ಶಾಸಕರಿಗೂ ವಿಪ್‌ ಅನ್ವಯವಾಗಲಿದೆ ಅಥವಾ ಸಭಾಧ್ಯಕ್ಷರು ತೀರ್ಮಾನ ಪ್ರಕಟಿಸಲಿ. ಬಳಿಕ ನಮ್ಮ ಬಳಿ ಬನ್ನಿ’ ಎಂದು ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್‌ ಸೂಚಿಸಲಿದೆ ಎಂಬ ವಿಶ್ವಾಸ ಮೈತ್ರಿ ನಾಯಕರದ್ದಾಗಿದೆ. ಈ ತೀರ್ಮಾನ ಹೊರಬಿದ್ದರೆ, ವಿಪ್ ಉಲ್ಲಂಘಿಸಿದರೆ ಅನರ್ಹರಾಗುತ್ತೀರಿ ಎಂಬ ಬೆದರಿಕೆಯ ತಂತ್ರ ಒಡ್ಡಿ ಬಿಜೆಪಿ ಪಾಳಯ ಸೇರಿಕೊಂಡಿರುವ ಅತೃಪ್ತ ಶಾಸಕರ ಪೈಕಿ ಕೆಲವರನ್ನು ಕರೆತಂದು ಸರ್ಕಾರ ಉಳಿಸಿಕೊಳ್ಳುವುದು ಮೈತ್ರಿ ನಾಯಕರ ಮುಂದಿರುವ ಲೆಕ್ಕಾಚಾರ. ಇದರ ಜತೆಗೆ, ಬಿಜೆಪಿಯ ಕೆಲವರನ್ನು ಸೆಳೆಯುವ ಯತ್ನವೂ ನಡೆದಿದೆ.

‘ರಾಜೀನಾಮೆಯನ್ನೇ ಕೊಟ್ಟಿರುವಾಗ ಅನರ್ಹತೆ ಲೆಕ್ಕಕ್ಕೇ ಇಲ್ಲ. ವಿಪ್ ಉಲ್ಲಂಘನೆ ಮಾಡಿ ಸರ್ಕಾರ ಪತನವಾದ ಬಳಿಕವಷ್ಟೇ ತಮ್ಮನ್ನು ಅನರ್ಹಗೊಳಿಸುವಂತೆ ಪಕ್ಷದ ಅಧ್ಯಕ್ಷರು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಬೇಕು. ಸರ್ಕಾರ ಪತನವಾದರೆ ಸಭಾಧ್ಯಕ್ಷರೂ ಇರುವುದಿಲ್ಲ. ಹೊಸ ಸರ್ಕಾರ ಬಂದ ಬಳಿಕ ಮನವಿ ಇರುತ್ತದೆಯಾದರೂ ಆಗ, ಬಿಜೆಪಿಯವರೇ ಸಭಾಧ್ಯಕ್ಷರಾಗಿರುವುದರಿಂದ ಬಚಾವಾಗಬಹುದು’ ಎಂಬುದು ಅತೃಪ್ತ ಶಾಸಕರ ತರ್ಕ ಎನ್ನಲಾಗಿದೆ. ಸರ್ಕಾರ ಅಲ್ಪಮತಕ್ಕೆ ಸಾಗಿದ್ದು, ಸದ್ಯವೇ ಬೀಳಲಿದೆ ಎಂಬ ವಿಶ್ವಾಸಕ್ಕೆ ಬಂದಿರುವ ಯಡಿಯೂರಪ್ಪ, ಸರ್ಕಾರ ರಚನೆ ಉಮೇದಿನಲ್ಲಿದ್ದಾರೆ. ‘ಈಗಾಗಲೇ 17 ಶಾಸಕರು ನಮ್ಮ ಜತೆಗೆ ಬಂದಿದ್ದು, ಸುಪ್ರೀಂಕೋರ್ಟ್‌ ತೀರ್ಮಾನದ ಬಳಿಕ 3ರಿಂದ 6 ಶಾಸಕರು ಮೈತ್ರಿ ಕೂಟ ತೊರೆಯಲಿದ್ದಾರೆ. ಆಮಿಷಕ್ಕೆ ಬಲಿಯಾಗಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ’ ಎಂದು ತಮ್ಮ ಶಾಸಕರಿಗೆ ಸಲಹೆ ನೀಡಿದ್ದಾರೆ.

ಟೀಕೆಗಳನ್ನು ಸಹಿಸಿಕೊಂಡು ಕೂರಲು ನಾನು ಮೂಕ ಅಲ್ಲ

‘ಅನೇಕ ಪುಣ್ಯಾತ್ಮರು ಪ್ರಾಣ ಪಣಕ್ಕಿಟ್ಟು ಪ್ರಜಾತಂತ್ರ ತಂದುಕೊಟ್ಟಿದ್ದಾರೆ. ಅದು ನಮ್ಮ ಸೌಭಾಗ್ಯ. ಇಲ್ಲಿ ಫುಟ್ಬಾಲ್‌ ಆಡಬೇಡಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶಾಸಕರಿಗೆ ಚುರುಕು ಮುಟ್ಟಿಸಿದರು.

ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸ ಮತ ಯಾಚನೆಯ ದಿನಾಂಕ ಪ್ರಕಟಿಸುವ ಸಂದರ್ಭ ಶಾಸಕರಿಗೆ ಮಾತಿನ ಚಾಟಿ ಬೀಸಿದರು. ‘ನನ್ನ ವಿರುದ್ಧ ವಾಗ್ಬಾಣ ಬಿಟ್ಟರೆ, ಈ ಸ್ಥಾನದ ಚೌಕಟ್ಟಿನಲ್ಲಿ ಸೀಮಿತವಾಗಿ ಉತ್ತರ ಕೊಡಲು ಸಾಧ್ಯ. ಆದರೆ, ಟೀಕೆಗಳನ್ನು ಸಹಿಸಿಕೊಂಡು ಕೂರಲು ನಾನು ಮೂಕ ಅಲ್ಲ’ ಎಂದೂ ತಿವಿದರು. ‘ಯಾರನ್ನೂ ಓಲೈಸಲು ಇಲ್ಲಿ ಕುಳಿತಿಲ್ಲ. ನನ್ನ ತಲೆ ಮೇಲೆ ನ್ಯಾಯದ ತಕ್ಕಡಿ ಇದೆ. ಎಲ್ಲಕ್ಕಿಂತ ಜನರ ಆಶಯ ಕಾಪಾಡುವುದು ಆದ್ಯತೆ’ ಎಂದರು.


ರಾಮಲಿಂಗಾರೆಡ್ಡಿ ಚಿತ್ತ ಎತ್ತ?

ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಕಾಂಗ್ರೆಸ್‌ನಲ್ಲೇ ಉಳಿಯಲಿದ್ದಾರೆಯೇ ಅಥವಾ ಬಿಜೆಪಿಯತ್ತ ವಾಲಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗದೇ ‘ಕೈ’ ನಾಯಕರು ಪೇಚಿಗೆ ಸಿಲುಕಿದ್ದಾರೆ.

ರೆಡ್ಡಿ ಪಕ್ಷದಲ್ಲೇ ಉಳಿದರೆ, ಪಕ್ಷದ ವಿರುದ್ಧ ತಿರುಗಿಬಿದ್ದು ಮುಂಬೈ ಸೇರಿರುವ ಅತೃಪ್ತ ಶಾಸಕರ ಪೈಕಿ ಮುನಿರತ್ನ, ಎಸ್.ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ ವಾಪಸ್ ಬರಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿದೆ. ರೆಡ್ಡಿ ಅವರನ್ನು ಭಾನುವಾರ ಭೇಟಿ ಮಾಡಿದ್ದ ಕಾಂಗ್ರೆಸ್‌ ನಾಯಕರು ಹಲವು ಪಟ್ಟು ಹಾಕಿದರು. ಆದರೆ, ರೆಡ್ಡಿ ತಮ್ಮ ನಿಲುವು ಏನೆಂಬ ಗುಟ್ಟು ಬಿಟ್ಟುಕೊಡಲಿಲ್ಲ. ಸರ್ಕಾರ ಉಳಿದರೆ ಒಂದು ಲೆಕ್ಕ, ಹೋದರೆ ಮತ್ತೊಂದು ಲೆಕ್ಕ ಎಂಬುದು ರೆಡ್ಡಿ ಅವರ ಆಲೋಚನೆ ಎನ್ನಲಾಗಿದೆ.

**

ಅತ್ಯಂತ ವಿಶ್ವಾಸದಲ್ಲಿ ಇರುವುದರಿಂದಲೇ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇನೆ. ಗೆಲ್ಲುತ್ತೇನೆ; ಕಾದು ನೋಡಿ

- ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

**

ವಿಶ್ವಾಸ ಇಲ್ಲದೇ ವಿಶ್ವಾಸ ಮತ ಯಾಚಿಸಲು ಯಾರಾದರೂ ಮುಂದಾಗುತ್ತಾರೆಯೇ? ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆದ್ದೇ ಗೆಲ್ಲುತ್ತೇವೆ

- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
**

ಕುಮಾರಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಗುರುವಾರ ಪತನವಾಗುವುದು ನಿಶ್ಚಿತ

- ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.