ADVERTISEMENT

ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ‘ಮೈತ್ರಿ’ಗೆ ಕುತ್ತು?

ಸಿದ್ದರಾಮಯ್ಯ ಬಳಿ ಅನಿಸಿಕೆ ಹಂಚಿಕೊಂಡ ಕಾಂಗ್ರೆಸ್‌ ಶಾಸಕರು

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:01 IST
Last Updated 7 ಮೇ 2019, 20:01 IST
   

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇದ್ದರೆ ಜೆಡಿಎಸ್‌ ಜೊತೆಗಿನ ಮೈತ್ರಿ ಕಡಿದುಕೊಳ್ಳುವುದು ಒಳ್ಳೆಯದು’ ಎಂದು ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಬಳಿ ಕಾಂಗ್ರೆಸ್‌ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರ ಅಹವಾಲುಗಳನ್ನು ಆಲಿಸುತ್ತಿಲ್ಲ. ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳಿಗಷ್ಟೆ ಸಮ್ಮಿಶ್ರ ಸರ್ಕಾರ ಸೀಮಿತ ಎಂಬಂತಾಗಿದೆ’ ಎಂದು ದೂರಿದ್ದಾರೆ.

‘ನಮ್ಮ ಪಕ್ಷದ ಬೇಷರತ್‌ ಬೆಂಬಲದಿಂದ ಮುಖ್ಯಮಂತ್ರಿಯಾದರೂ ಅವರು ತಮ್ಮ ಕುಟುಂಬಕ್ಕಷ್ಟೇ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗಿದೆ. ಈ ಮೈತ್ರಿ ಐದು ವರ್ಷ ಮುಂದುವರಿದರೆ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ಹೊಡೆತ ಬೀಳಲಿದೆ’ ಎಂದರು.

ADVERTISEMENT

ಹಳೇ ಮೈಸೂರು ಭಾಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸುತ್ತಿದೆ ಎಂಬ ಅಪವಾದವೂ ಇದೆ. ಇಂಥ ಸ್ಥಿತಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವುದರಲ್ಲಿ ಅರ್ಥ ಇಲ್ಲ. ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಮೈತ್ರಿ ಕಡಿದುಕೊಳ್ಳುವುದೇ ಒಳಿತು ಎಂದು ಕೆಲವು ಶಾಸಕರು ನೇರವಾಗಿಯೇ ಅವಲತ್ತುಕೊಂಡಿದ್ದಾರೆ ಎಂದು ಗೊತ್ತಾಗಿದೆ.

‘ಸರ್ಕಾರ ಪತನಗೊಂಡರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಬೇಡ. ಚುನಾವಣೆಗೆ ಹೋಗುವುದೇ ಉತ್ತಮ. ನೀವು ಮುಖ್ಯಮಂತ್ರಿ ಆಗಿದ್ದಾಗ ಹಲವು ಒಳ್ಳೆಯ ಯೋಜನೆಗಳನ್ನು ಕೊಟ್ಟಿದ್ದೀರಿ. ಈಗಲೂ ರಾಜ್ಯದ ಜನರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಕುಮಾರಸ್ವಾಮಿ ಅವರಿಗೆ ಮೊದಲಿದ್ದಂತೆ ಜನಬೆಂಬಲ ಇಲ್ಲ. ದಿನೇ ದಿನೇ ಅವರ ವರ್ಚಸ್ಸು ಕುಸಿಯುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

‘ಮತ್ತೆ ಚುನಾವಣೆಗೆ ಹೋದರೆ ಜೆಡಿಎಸ್, ಬಿಜೆಪಿಗಿಂತಲೂ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಆಗಲಿದೆ. ಜೆಡಿಎಸ್ ಈಗ ಹೊಂದಿರುವಷ್ಟು ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಲೋಕಸಭೆ ಫಲಿತಾಂಶದವರೆಗೂ ಕಾದು ನೋಡೋಣ. ಫಲಿತಾಂಶ ಬಂದ ಬಳಿಕ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳಲಿದೆಯೋ ಗೊತ್ತಿಲ್ಲ. ಆದರೂ ಪಕ್ಷದ ವಸ್ತುಸ್ಥಿತಿಯನ್ನು ವರಿಷ್ಠರಿಗೆ ಮನವರಿಕೆ ಮಾಡೋಣ’ ಎಂದೂ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.

ಸಮನ್ವಯ ಸಮಿತಿ ಸಭೆ ಶೀಘ್ರ

ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ, ಫಲಿತಾಂಶದ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಜೆಡಿಎಸ್‌– ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಲಿದ್ದಾರೆ. ನಿರೀಕ್ಷಿತ ಫಲಿತಾಂಶ ಬಾರದೇ ಇದ್ದರೆ, ಕಾಂಗ್ರೆಸ್‌ ನಾಯಕರು ‘ಮೈತ್ರಿ’ಯ ಭವಿಷ್ಯದ ಬಗ್ಗೆ ಅಪಸ್ವರ ಎತ್ತುವ ಸಾಧ್ಯತೆ ಇದೆ.

ಎಲ್ಲಾ ಹಂತಗಳಲ್ಲೂ ಸಂಘಟನಾತ್ಮಕ ಬದಲಾವಣೆ

ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವಲ್ಲದೆ, ಪಕ್ಷದ ಸಂಘಟನೆಯ ಎಲ್ಲ ಹಂತಗಳಲ್ಲೂ ಪದಾಧಿಕಾರಿಗಳ ಬದಲಾವಣೆ ಆಗಲಿದೆ.

ಜಿಲ್ಲಾ, ತಾಲ್ಲೂಕು, ಮಂಡಲ ಮಟ್ಟದ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಬದಲಾವಣೆ ಆಗಲಿದ್ದು, ಹೊಸಬರು ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಲೋಕಸಭೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಬೆಂಗಳೂರಿನ ಬಿಬಿಎಂಪಿಗೂ ಚುನಾವಣೆ ಎದುರಾಗುವ ಕಾರಣ ಅದಕ್ಕೆ ಪೂರಕವಾಗಿ ತಳಮಟ್ಟದಿಂದಲೇ ಸಂಘಟನೆ ಬಲಪಡಿಸಲು ನಿರ್ಧರಿಸಲಾಗಿದೆ. ಸಂಘಟನೆಯಲ್ಲಿ ಶೇ 50ರಷ್ಟು ಹೊಸಬರು ಮತ್ತು ಯುವಕರಿಗೆ ಆದ್ಯತೆ ನೀಡಲಾಗುತ್ತದೆ.

ಒಂದು ವೇಳೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿ ಮಧ್ಯಂತರ ಚುನಾವಣೆ ಬಂದರೂ ಅದಕ್ಕೆ ಸಿದ್ಧರಾಗಿರಲು ಕಾರ್ಯಕರ್ತರ ಪಡೆ ರೂಪಿಸಲು ಕಮಲ ಪಕ್ಷ ತೀರ್ಮಾನಿಸಿದೆ.

ಲಿಂಬಾವಳಿ– ರವಿ ಮಧ್ಯೆ ಪೈಪೋಟಿ: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಸಿ.ಟಿ.ರವಿ ಮಧ್ಯೆ ಪೈಪೋಟಿ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳಿಸಿದರೆ, ಯಡಿಯೂರಪ್ಪ ಅವರ ಮಾತು ನಡೆಯುತ್ತದೆ. ಆಗ ಲಿಂಬಾವಳಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ಕಡಿಮೆ ಸ್ಥಾನಗಳು ಸಿಕ್ಕರೆ, ಸಿ.ಟಿ.ರವಿಗೆ ಹುದ್ದೆ ಒಲಿಯಬಹುದು ಎಂಬ ಲೆಕ್ಕಾಚಾರ ನಡೆದಿದೆ.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೆಸರನ್ನೂ ಅಧ್ಯಕ್ಷ ಸ್ಥಾನಕ್ಕೆ ಎಳೆದು ತರಲಾಗಿದೆ. ಸಂತೋಷ್‌ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಕ್ಷಕ್ಕೆ ನಿಯೋಜಿತರಾಗಿದ್ದಾರೆ. ಸಂತೋಷ್‌ ವೈಯಕ್ತಿಕವಾಗಿ ಆಗಲಿ, ಬಿಜೆಪಿ ಪಕ್ಷವಾಗಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕಾಏಕಿ ಮುಖ್ಯಮಂತ್ರಿ ಅಥವಾ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂರಲು ಅವರಿಗೆ ಸಾಧ್ಯವಿಲ್ಲ.

ಅವರು ಅಧಿಕೃತವಾಗಿ ‘ರಾಜಕೀಯ’ಕ್ಕೆ ಪ್ರವೇಶಿಸಬೇಕಾದರೆ ಆರ್‌ಎಸ್‌ಎಸ್‌ ಮುಂದೆ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬೇಕು. ಅದಕ್ಕೆ ಸಂಘ ಒಪ್ಪಿಗೆ ನೀಡಿದರಷ್ಟೇ ಅವರು ರಾಜಕೀಯ ಪ್ರವೇಶಿಸಲು ಬಾಗಿಲು ತೆರೆಯುತ್ತದೆ. ಪ್ರಧಾನಿ ನರೇಂದ್ರಮೋದಿ, ರಾಮ ಮಾಧವ್‌ ಕೂಡ ಇದೇ ರೀತಿ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು ಎಂದು ಆರ್‌ಎಸ್‌ಎಸ್‌ ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್‌ನಿಂದ ನಿಯುಕ್ತರಾದವರು ಪಕ್ಷ ಮತ್ತು ಸಂಘದ ನಡುವೆ ಕೊಂಡಿಯಂತೆ ಮತ್ತು ಸಂಘದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆರ್‌ಎಸ್‌ಎಸ್‌ ಸಹ ಸಂತೋಷ್‌ ಅವರನ್ನು ಪಕ್ಷಕ್ಕೆ ಬಿಟ್ಟುಕೊಡುವವರೆಗೆ ಪಕ್ಷದ ಸಂಘಟನೆಗೆ ಶ್ರಮಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.