
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚುವ ಮೂಲಕ ಮಹಿಳೆಯರ ಮಾನಹಾನಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು ರಾಜ್ಯ ಮಹಿಳಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದರು.
ನಂತರ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಅಶ್ಲೀಲ ವಿಡಿಯೊಗಳನ್ನು ಸೋರಿಕೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅಪಚಾರ ಎಸಗಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ನೊಂದವರಿಗೆ ಎಸ್‌ಐಟಿಯಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಹಾಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟದ ಪ್ರಭಾವಿ ಸಚಿವರೇ ಈ ವಿಡಿಯೊ ವಿತರಣೆಯ ರೂವಾರಿ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೆಸರೂ ತಳುಕು ಹಾಕಿಕೊಂಡಿದೆ. ಹೀಗಾಗಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸುವುದು ಅಸಾಧ್ಯ. ಪೆನ್‌ಡ್ರೈವ್ ಹಂಚಿಕೆಯಿಂದ ಸಂತ್ರಸ್ತೆಯರು ಅಪಾರ ನೋವು, ಅವಮಾನ ಮತ್ತು ಯಾತನೆ ಅನುಭವಿಸುತ್ತಿದ್ದಾರೆ. ಅವರ ಕುಟುಂಬದವರ ಮೇಲಾಗಿರುವ ಹಾನಿ ಮತ್ತು ಅಪಮಾನ ವಿವರಿಸಲು ಅಸಾಧ್ಯ. ವಿಡಿಯೋದಲ್ಲಿರುವ ಮಹಿಳೆಯರ ಗುರುತು ಬಹಿರಂಗ ಆಗುವಂತೆ ಮಾಡಿರುವುದು ಅಕ್ಷಮ್ಯ ಎಂದರು.
ಬೆಂಗಳೂರು ಮಹಾನಗರ ಜನತಾದಳ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಎಸ್. ರಾವ್, ವಕ್ತಾರರಾದ ಪ್ರಶಾಂತಿ, ರಾಜಾಜಿನಗರ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಕವಿತಾ, ರಾಜ್ಯ ಕಾರ್ಯದರ್ಶಿ ಮಂಗಳಮ್ಮ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.